ಕುಡಿಯೋಕೆ ಮದ್ಯ ಸಿಗದವರು ಇನ್ನೇನು ಮಾಡ್ತಾರೆ: ವೈನ್‌ಶಾಪ್ ಗೋಡೆ ಒಡೆದ ವ್ಯಸನಿಗಳು!

Alcohal-Web
Published on

ಸವಣೂರ: ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಎಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿದೆ. ಎಲ್ಲಿಯೂ ಮದ್ಯದಂಗಡಿಗಳು ತೆರೆಯದೆ ಮದ್ಯವ್ಯಸನಿಗಳು ತೀವ್ರ ಆತಂಕಕ್ಕೆ ಈಡಾಗಿದ್ದಾರೆ. ಅದಲ್ಲದೆ ಲಾಕ್‌ಡೌನ್ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಲಕ್ಷಣಗಳೂ ಗೋಚರಿಸುತ್ತಿವೆ.

ಇದರಿಂದ ಕಂಗೆಟ್ಟಿರುವ ಕೆಲವರು ಮದ್ಯದಂಗಡಿಗಳಿಗೇ ಕನ್ನ ಹಾಕುವ ಭಂಡಧೈರ್ಯ ತೋರುತ್ತಿದ್ದಾರೆ. ಇಂಥದೇ ಒಂದು ಘಟನೆ ಸವಣೂರಿನಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಶ್ರೀ ರೇಣುಕಾದೇವಿ ವೈನ್ ಶಾಪ್‌ನ ಗೋಡೆಯನ್ನೇ ಕುಡುಕರು ಒಡೆದು ಹಾಕಿದ್ದಾರೆ. ಕಲಾಲ ಕುಟುಂಬದವರಿಗೆ ಸೇರಿದ ಈ ವೈನ್ ಶಾಪ್‌ನ ಹಿಂದಿನ ಗೋಡೆಯನ್ನು ಒಂದು ಅಡಿ ಅಗಲದಷ್ಟು ಕೊರೆದು ಕೈಗೆ ಸಿಕ್ಕಷ್ಟು ಮದ್ಯದ ಬಾಟಲಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಎಷ್ಟು ಬಾಟಲಿ ಕಳುವಾಗಿವೆ ಎಂಬುದರ ನಿಖರ ಮಾಹಿತಿ ಗೊತ್ತಾಗಿಲ್ಲ. ಈ ಕುರಿತು ಗುರುವಾರ ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಂದೋಬಸ್ತ್ ಒದಗಿಸಲಾಗಿದೆ.

ಪಾರ್ಸಲ್ ಮಾರಾಟಕ್ಕೆ ಅನುಮತಿ ಕೊಡಿ:

ಈ ಮಧ್ಯೆ, ಕರೊನಾ ವೈರಸ್‌ನಿಂದ ಮದ್ಯದಂಗಡಿಗಳ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಉಂಟಾಗಿದ್ದು, ಲಾಕ್ ಡೌನ್‌ಗಿಂತ ಮುನ್ನ ಮದ್ಯದಂಗಡಿಗಳಲ್ಲಿ ಸಂಗ್ರಹವಾಗಿರುವ ಮದ್ಯವನ್ನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಕರ್ನಾಟಕ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಹಾಗೂ ಫೆಡರೇಷನ್ ಆ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಮದ್ಯಕ್ಕಾಗಿ ಮದ್ಯದಂಗಡಿಗಳಿಗೇ ಕನ್ನ ಹಾಕುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಹಾಗಾಗಿ. ಅಂಗಡಿಗಳಲ್ಲಿ ಸಂಗ್ರಹವಿರುವ ಮದ್ಯವನ್ನು ಪ್ರತಿದಿನ ನಾಲ್ಕು ಗಂಟೆ ಪಾರ್ಸಲ್ ಮಾರಾಟ ಮಾಡಲಿಕ್ಕಾದರೂ ಅವಕಾಶ ನೀಡಬೇಕು ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೊನ್ನಗಿರಿಗೌಡ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net