More

    ಕರೊನಾ ಲಾಕ್‌ಡೌನ್ ಮುಗಿದ ಬಳಿಕವೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ: ಅದಕ್ಕೂ ಮೊದಲು ಪುನರ್ಮನನ ತರಗತಿ

    ಕರೊನಾ ಲಾಕ್‌ಡೌನ್ ಮುಗಿದ ಬಳಿಕವೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ: ಅದಕ್ಕೂ ಮೊದಲು ಪುನರ್ಮನನ ತರಗತಿ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಲಾಕ್‌ಡೌನ್ ಪೂರ್ಣಗೊಂಡ ಬಳಿಕವೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆಯಲಿದೆ. ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಪಬ್ಲಿಕ್ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ನಡೆಸುವುದಿಲ್ಲ.

    ಸಾರ್ವಜನಿಕ ವಲಯದಲ್ಲಿ ಪರೀಕ್ಷೆಯ ದಿನಾಂಕ ಕುರಿತು ವದಂತಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಗುರುವಾರ ಈ ಸ್ಪಷ್ಟನೆಯನ್ನು ಫೇಸ್‌ಬುಕ್ ಲೈವ್ ಮೂಲಕ ನೀಡಿದ್ದಾರೆ.

    ಎಸ್‌ಎಸ್‌ಎಲ್‌ಸಿ ಹಾಗೂ ಬಾಕಿ ಉಳಿದಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಲಾಕ್‌ಡೌನ್ ಪೂರ್ಣಗೊಂಡ ಬಳಿಕವೇ ನಡೆಸಲಾಗುತ್ತದೆ. ಪರೀಕ್ಷೆ ನಡೆಸುವುದಕ್ಕೂ ಮೊದಲು 7ರಿಂದ 10 ದಿನಗಳ ಪುನರ್ ಮನನ ತರಗತಿಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.

    ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ 7ರಿಂದ 10 ದಿನಗಳ ಪುನರ್ ಮನನ ಅವಧಿಯನ್ನು ಕಲ್ಪಿಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಮನಸ್ಥಿತಿಗೆ ಬರುವಂತೆ ಕ್ರಮ ವಹಿಸಲಾಗುವುದು. ಈ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದಿಲ್ಲ. ಮೇ ತಿಂಗಳಿನಲ್ಲಿ ಎದುರಾಗಬಹುದಾದ ಪರಿಸ್ಥಿತಿ ಪರಾಮರ್ಶಿಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆಗಳ ನಡುವೆ ಅಂತರ ಕಾಯ್ದುಕೊಳ್ಳಲಾಗುತ್ತದೆ ಎಂದಿದ್ದಾರೆ.

    ವಿದ್ಯಾರ್ಥಿಗಳಿಗೆ ಈಗಾಗಲೇ ಶಿಕ್ಷಕರು ವಿದ್ಯಾರ್ಥಿಗಳ ಗೊಂದಲಗಳನ್ನು ನಿವಾರಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ದೂರದರ್ಶನದ ಚಂದನ ವಾಹಿನಿ ಮತ್ತು ಆಕಾಶವಾಣಿಯಲ್ಲಿ ಮಕ್ಕಳ ಉಪಯೋಗಕ್ಕಾಗಿ ಈಗಾಗಲೇ ಪ್ರಸಾರ ಮಾಡಿರುವ ಪರೀಕ್ಷಾ ಸಿದ್ಧತಾ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

    ಮೌಲ್ಯಮಾಪನ ವೇಳೆ ಸಾಮಾಜಿಕ ಸುರಕ್ಷತೆ ಮತ್ತು ಅಂತರದ ಸಮಸ್ಯೆ ಉದ್ಭವಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಒಂದೇ ಮೌಲ್ಯಮಾಪನ ಕೇಂದ್ರದಲ್ಲಿ ಹೆಚ್ಚಿನ ಮೌಲ್ಯಮಾಪಕರನ್ನು ನಿಯೋಜಿಸುವ ಬದಲಾಗಿ ಉಪ ಕೇಂದ್ರಗಳ ಮೂಲಕ ಕನಿಷ್ಠ ಸಂಖ್ಯೆಯ ಮೌಲ್ಯಮಾಪಕರನ್ನು ನಿಯೋಜಿಸಲಾಗುತ್ತದೆ.

    ಲಾಕ್‌ಡೌನ್ ಬಳಿಕ ಟಿಇಟಿ ಪರೀಕ್ಷೆ ಹಾಗೂ ಪಿಯು ಉಪನ್ಯಾಸಕರ ನೇಮಕಾತಿ ಕೌನ್ಸಲಿಂಗ್ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಎಸ್‌ಎಟಿಎಸ್ ತಂತ್ರಾಂಶದಲ್ಲಿ ಅಳವಡಿಸಲು ಒಂದು ವಾರ ಸಮಯ ನೀಡಲಾಗುತ್ತದೆ. ಈ ಎಲ್ಲಾ ವಿಷಯಗಳನ್ನು ಕುರಿತು ಏ.13ರಂದು ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರುಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

    ಶಿಕ್ಷಕರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ:
    6ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಇಲಾಖೆ ಮುಖ್ಯಸ್ಥರ ಸಭೆ ನಡೆಸಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ. ಚರ್ಚಿಸಿ ನಿರ್ಧರಿಸಿದ ಬಳಿಕ ಮುಂದಿನ ಒಂದು ತಿಂಗಳಿನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲು ನಿರ್ದೇಶಿಸಲಾಗಿದೆ. ಈಗಿರುವ ಕೆಲವು ತಾಂತ್ರಿಕ ವಿಷಯಗಳಿಗೆ ತಿದ್ದುಪಡಿ ತರುವ ಮೂಲಕ ಬಿಇ, ಬಿಕಾಂ, ಡಿಪ್ಲೊಮಾ ವ್ಯಾಸಂಗ ಮಾಡಿದವರಿಗೂ ನೇಮಕಾತಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts