ರಾಜಧಾನಿಯಲ್ಲಿ ಮಳೆಗಿಂತ ಗಾಳಿ ವೇಗ ಹೆಚ್ಚಳ:ಜನರಿಗೆ ಥಂಡಿ ಅನುಭವ

Actor Vishal
Published on

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರವೂ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದ್ದು, ಮಳೆಗಿಂತ ವೇಗವಾಗಿ ಗಾಳಿ ಬೀಸುತ್ತಿದೆ.ಇದರಿಂದ ಜನರಿಗೆ ಥಂಡಿ ವಾತಾವರಣ ಅನುಭವವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯವಾದರೂ ಹೆಚ್ಚಿನ ಜನರು ಹೊರಗಡೆ ತೆರಳಲಿಲ್ಲ.

ಅಲ್ಲದೆ, ಅರಬ್ಬಿ ಸಮುದ್ರದಲ್ಲಿ ಮೇಲ್ಮೆ ಸುಳಿಗಾಳಿ ಉಂಟಾಗಿರುವ ಪರಿಣಾಮ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದೆ. ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಈ ಅವಧಿಯಲ್ಲಿ ಹಗುರದಿಂದ ಮಳೆಯಾಗಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಮತ್ತು 20 ಡಿ.ಸೆ.ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ಮೂರು ದಿನಗಳಿಂದ ನಗರದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಷ್ಣಾಂಶ ಕುಸಿತವಾಗಿದೆ. ವಾಡಿಕೆಯಂತೆ 28.7 ಡಿ.ಸೆ. ದಾಖಲಾಗಬೇಕಿತ್ತು. 26.7 ಡಿ.ಸೆ. ವರದಿಯಾಗಿದ್ದು, ವಾಡಿಕೆಗಿಂತ 2.2 ಡಿ.ಸೆ. ಕಡಿಮೆ ದಾಖಲಾಗಿದೆ.

2 ವಾರದಿಂದ ಮಳೆ ಕಡಿಮೆ:

ಮಾ.1ರಿಂದ ಮೇ 31ರವರೆಗೆ ನಗರದಲ್ಲಿ ವಾಡಿಕೆಗಿಂತ ಅಧಿಕವಾಗಿ ಪೂರ್ವ ಮುಂಗಾರು ಮಳೆಯಾಗಿತ್ತು. ಈ ಅವಧಿಯಲ್ಲಿ ದಾಖಲೆ ಮಟ್ಟದಲ್ಲಿ ಮಳೆ ಸುರಿದಿತ್ತು. ಜೊತೆಗೆ, ವಾಡಿಕೆಗಿಂತ ಮುನ್ನ ಮುಂಗಾರು ಪ್ರವೇಶಿಸಿದ್ದ ಸಂದರ್ಭದಲ್ಲಿ ಒಳ್ಳೆಯ ಮಳೆಯಾಗಿತ್ತು. ಆದರೆ, 2 ವಾರಗಳಿಂದ ವಾಡಿಕೆಗಿಂತ ಕಡಿಮೆ ಪ್ರಮಾಣ ಮಳೆಯಾಗಿದೆ. ವಾಡಿಕೆಯಂತೆ 48 ಮಿಮೀ ಸುರಿಯಬೇಕಿತ್ತು. ಆದರೆ, 38 ಮಿಮೀ ಬಿದ್ದಿದ್ದು, ವಾಡಿಕೆಗಿಂತ ಶೇ.21 ಕಡಿಮೆಯಾಗಿದೆ. ಈ ಅವಧಿಯಲ್ಲಿ ಮಳೆಗಿಂತ ಮೋಡ ಕವಿದ ವಾತಾವರಣ ಜಾಸ್ತಿ ಕಾಣಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net