ರಾಜ್ಯದಲ್ಲಿ ಹಲವೆಡೆ ಮಳೆಗಿಂತ ಗಾಳಿ ವೇಗ ಹೆಚ್ಚಳ: ಜೂ.18ರಿಂದ ಇಳಿಮುಖ

Rain Alert
Published on

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಜೂ.18ರಿಂದ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಮಲೆನಾಡು, ಕರಾವಳಿ ಕರ್ನಾಟಕ ಭಾಗದಲ್ಲಿ ಭಾನುವಾರವೂ ಮಾನ್ಸೂನ್​ ಸಕ್ರಿಯವಾಗಿದ್ದು, ವರುಣಾರ್ಭಟ ಜೋರಾಗಿತ್ತು. ಬೆಂಗಳೂರು ನಗರ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಗಾಳಿ ವೇಗವೂ ಜಾಸ್ತಿಯಾಗಿದ್ದು,ಥಂಡಿ ವಾತಾವರಣ ಅನುಭವವಾಗುತ್ತಿದೆ.

24 ಗಂಟೆ ಅವಧಿಯಲ್ಲಿ ದಕ್ಷಿಣ ಕನ್ನಡದ ಪಣಂಬೂರು ವೀಕ್ಷಣಾಲಯ 21, ಬಂಟ್ವಾಳ 14, ಮಂಗಳೂರು 17, ಮೂಡಬಿದ್ರೆ 13, ಉಪ್ಪಿನಂಗಡಿ 11, ಚಿಕ್ಕಮಗಳೂರಿನ ಕೊಟ್ಟಿಗೆಹಾರ 15, ಕೊಡಗಿನ ಭಾಗಮಂಡಲ 13 ಸೆಂ.ಮೀ. ಮಳೆಯಾಗಿದೆ. ಉಡುಪಿ, ಬೆಳಗಾವಿ ವ್ಯಾಪ್ತಿಯ ಪ್ರದೇಶಗಳಲ್ಲಿ 7ರಿಂದ 10 ಸೆಂ.ಮೀ.ವರೆಗೆ ವರ್ಷಧಾರೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜೂ.16ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್​ ಅಲರ್ಟ್​​​ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಜೂ.17ರಿಂದ ಜೂ.18ರವರೆಗೆ ಆರೆಂಜ್​ ಅಲರ್ಟ್​​​​ ಇರಲಿದೆ. ಗಂಟೆಗೆ 45-55 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಹ ಕೊಡಲಾಗಿದೆ.

ಬೆಳಗಾವಿ, ಧಾರವಾಡ, ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಮುಂದಿನ ಜೂ.16ರಂದು ಆರೆಂಜ್​ ಅಲರ್ಟ್​​​​ ಇರಲಿದೆ. ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರದಲ್ಲಿ ಮುಂದಿನ 2 ದಿನ ಯೆಲ್ಲೋ ಅಲರ್ಟ್​​​ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ವರ್ಷಧಾರೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net