

ಸಿದ್ದಾಪುರ: ಕಳೆದ ಎರಡು ದಿನದಿಂದ ನಿರಂತರವಾಗಿ ಆರಿದ್ರಾ ಮಳೆಯೊಂದಿಗೆ ಗಾಳಿಯೂ ಜೋರಾಗಿ ಬೀಸುತ್ತಿದ್ದು, ಇದರಿಂದ ತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಕಣ್ಣುಮುಚ್ಚಾಲೆ ಉಂಟಾಗಿದೆ.
ತಾಲೂಕಿನಲ್ಲಿ ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗಿನವರೆಗೆ 53.2 ಮಿ.ಮೀ. ಮಳೆ ಬಿದ್ದಿದೆ. ಈ ವರ್ಷ ಇಂದಿನವರೆಗೆ 587.2 ಮಿ.ಮೀ. ಮಳೆ ಬಿದ್ದಂತಾಗಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ 153 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು 13 ಟಿಸಿ ಹಾಳಾಗಿದೆ.
ಎರಡು ದಿನದಿಂದ ಬಿದ್ದ ಮಳೆ ಹಾಗೂ ಗಾಳಿಗೆ 22 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ.