

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು
ಕಾಂಗ್ರೆಸ್ನ ಪ್ರಮುಖ ನಾಯಕರು ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವ ಆಸ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಿರೀಕ್ಷಿತ ಮಟ್ಟದಲ್ಲಿ ಕ್ಷೇತ್ರ ಹಿಡಿತಕ್ಕೆ ಸಿಗುತ್ತಿಲ್ಲ ಎಂಬ ವರದಿ ಪಕ್ಷದ ಕೈಸೇರಿದೆ. 4 ಲಕ್ಷಕ್ಕೂ ಹೆಚ್ಚು ಮತದಾರರಿರುವ ಮತ್ತು ಚದುರಿದಂತೆ ಬೇರೆ ಬೇರೆ ಭೌಗೋಳಿಕ ವಾತಾವರಣದಲ್ಲಿರುವ ಈ ಕ್ಷೇತ್ರದ ಜನರ ಮನಸ್ಸಿನಲ್ಲೇನಿದೆ ಎಂದು ನಡೆಸಿದ ಆಂತರಿಕ ಸಮೀಕ್ಷೆ ಪಕ್ಷದ ನಾಯಕರಲ್ಲಿ ಬೆವರು ತರಿಸಿದೆ ಎಂದು ಮೂಲಗಳು ತಿಳಿಸಿವೆ.
ಒಕ್ಕಲಿಗರ ಬಾಹುಳ್ಯದ ಕ್ಷೇತ್ರದಲ್ಲಿ ಡಿ.ಕೆ.ರವಿ ಪತ್ನಿ ಎಚ್. ಕುಸುಮಾ ಅವರನ್ನು ಕಣಕ್ಕಿಳಿಸಿದರೆ ವಿವಿಧ ಆಯಾಮಗಳಲ್ಲಿ ಪಕ್ಷಕ್ಕೆ ಒಳಿತಾಗುತ್ತದೆ ಎಂದು ಪಕ್ಷ ಭಾವಿಸಿತ್ತು. ಒಕ್ಕಲಿಗ ಮತ ಕ್ರೋಡೀಕರಣ, ಮಹಿಳೆ, ಎಲ್ಲಕ್ಕಿಂತ ಮುಖ್ಯವಾಗಿ ಅನುಕಂಪದ ಮತಗಳು ಮತ್ತು ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಸೇರಿದರೆ ಈ ಸಮೀಕರಣದ ಮೂಲಕ ಕ್ಷೇತ್ರ ಗೆಲ್ಲಬಹುದು ಎಂದು ಕಾಂಗ್ರೆಸ್ ಲೆಕ್ಕಹಾಕಿತ್ತು.
ಆದರೆ, ಸಮೀಕ್ಷೆಯಲ್ಲೂ ಪಕ್ಷ ಅಂದುಕೊಂಡ ವಾತಾವರಣ ಸೃಷ್ಟಿಯಾಗಿಲ್ಲ ಎಂಬ ಅಂಶ ಸಿಕ್ಕಿದೆ. ಒಕ್ಕಲಿಗ ಮತಗಳು ಹೆಚ್ಚು ಪ್ರಮಾಣದಲ್ಲಿ ಬಂದರೂ ಜೆಡಿಎಸ್ ಮತ್ತು ಬಿಜೆಪಿ ಕೂಡ ಒಂದಷ್ಟು ಪ್ರಮಾಣದಲ್ಲಿ ಪಡೆಯಬಹುದು, ಹಿಂದುಳಿದ ವರ್ಗದ ಮತ ಕಾಂಗ್ರೆಸ್ಗೆ ಕಡಿಮೆ ಪ್ರಮಾಣದಲ್ಲಿ ಸಿಗಲಿದೆ, ಜತೆಗೆ ಎಸ್ಸಿ ಮತಗಳು ಬಿಜೆಪಿಗೆ ಹೆಚ್ಚು ಪ್ರಮಾಣದಲ್ಲಿ ಹೋಗುವ ಸಾಧ್ಯತೆ ಕಾಣಿಸಿದೆ. ಇದೆ ಕಾರಣಕ್ಕೆ ಒಕ್ಕಲಿಗ ಮತಗಳ ಪ್ರಮಾಣ ಹೆಚ್ಚಿಸಲು ಸರ್ಕಸ್ ನಡೆಸಿದ್ದಾರೆ. ಬಿಜೆಪಿಗರು ಮುನಿರತ್ನ ಪರವಾಗಿ ತಳಮಟ್ಟದಲ್ಲಿ ಕೈಜೋಡಿಸಿಲ್ಲ ಎಂಬುದು ಕಾಂಗ್ರೆಸ್ಗೆ ಲಾಭಕರವಾದೀತು ಎಂಬ ಆಶಾಭಾವನೆಯಲ್ಲೇ ಪಕ್ಷದ ನಾಯಕರಿದ್ದಾರೆ.
ನಾಲ್ಕು ಲಕ್ಷ ಪ್ಲಸ್ ಮತದಾರ ನಾಡಿಮಿಡಿತ ಏನಿದೆ ಎಂಬುದನ್ನು ತಿಳಿಯುವ ಪ್ರಯತ್ನ ಪಕ್ಷದಿಂದ ಮಾಡಲಾಗಿತ್ತು. ಶೇ.2 ಮತದಾರರನ್ನು ತಲುಪುವಲ್ಲಿ ಪಕ್ಷ ಸಫಲವಾಗಿದ್ದು, ಅವರಲ್ಲಿನ ಅಭಿಪ್ರಾಯ ಹೆಕ್ಕಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಆಗಬೇಕಾದ ಕೆಲಸಗಳ ಬಗ್ಗೆ ಪಕ್ಷ ಗಮನ ನೀಡಿದೆ ಎಂದು ಹಿರಿಯ ಮುಖಂಡರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.