

* ಮತ್ತೊಂದು ಉಪಚುನಾವಣೆಗೆ ಅಖಾಡ ಸಿದ್ಧ
* ಕ್ಷೇತ್ರದ ಅಭಿವೃದ್ಧಿಗೆ ಡಿಸಿಎಂ ಭರವಸೆ
* ಜನಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತವೇ ಬರುತ್ತಿರುವುದು ವಿಶೇಷ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಉಪಚುನಾವಣೆ ಹೊಸ್ತಿಲಿನಲ್ಲಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ರಾಜ್ಯಸರ್ಕಾರ ಅನುದಾನದ ಹೊಳೆ ಹರಿಸುವುದೇ? ಇಂತಹುದೊಂದು ಆಶಾಭಾವನೆ ತಾಲೂಕಿನ ಜನರಲ್ಲಿ ಮೂಡಿದೆ.
ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಮತ್ತೊಂದು ಉಪಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಉಪ ಸಮರದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಅನುದಾನದ ಮಹಾಪೂರ ಹರಿದುಬರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನೀಡುತ್ತಿರುವ ಭರವಸೆಗಳು ಆಶಾ ಭಾವನೆ ಮೂಡಲು ಕಾರಣವಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ವಿನೂತನ ಜನಸ್ಪಂದನ ಕಾರ್ಯಕ್ರಮ ರೂಪಿಸಿದ್ದಾರೆ. ತಾಲೂಕಿನ ಎಲ್ಲ ಜಿಪಂ ಪ್ರಮುಖ ಸ್ಥಳಗಳಲ್ಲಿ ಈ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದೆ. ಇಡೀ ಜಿಲ್ಲಾಡಳಿತವೇ ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದು, ಪ್ರತಿ ಇಲಾಖೆಗೆ ಸಂಬಂಧಿಸಿದ ದೂರು ದುಮ್ಮಾನಗಳನ್ನು ಜನತೆ ಹಂಚಿಕೊಳ್ಳಬಹುದಾಗಿದೆ. ಪ್ರತಿ ಇಲಾಖೆಗಳ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಕಾರ್ಯಕ್ರಮ ನಡೆಯುವ ಮೊದಲೇ ಪ್ರತಿಮನೆಗಳಿಗೆ ಅರ್ಜಿಯನ್ನು ನೀಡುತ್ತಿದ್ದು, ಪ್ರತಿ ಸಮಸ್ಯೆಗಳ ಪಟ್ಟಿಯನ್ನು ಆ ಅರ್ಜಿಯಲ್ಲಿಯೇ ನೀಡಲಾಗಿದೆ. ಅರ್ಜಿ ಜತೆಗೆ ಪೂರಕವಾದ ದಾಖಲೆಗಳನ್ನು ಜನಸ್ಪಂದನ ಸಭೆಯಲ್ಲಿ ಸಲ್ಲಿಸಬಹುದಾಗಿದೆ. ಇಡೀ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವೇ ಗ್ರಾಮಕ್ಕೆ ಬರುತ್ತಿರುವುದು ವಿಶೇಷ. ಸೋಮವಾರ ಕೋಡಂಬಳ್ಳಿ ಹಾಗೂ ಅಕ್ಕೂರು ಜಿಪಂ ವ್ಯಾಪ್ತಿಯ ಸಭೆ ಮುಕ್ತಾಯಗೊಂಡಿದ್ದು, ಬುಧವಾರ ತಿಟ್ಟಮಾರನಹಳ್ಳಿ ಹಾಗೂ ಬೇವೂರು ಜಿಪಂ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಾಕಷ್ಟು ಭರವಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿದು ಬರುವುದೇ ಎಂಬ ನಿರೀಕ್ಷೆ ಹುಟ್ಟುಹಾಕಿದೆ. ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಅವರು ನೀಡಿರುವ ವಾಗ್ದಾನಗಳು ಇದಕ್ಕೆ ಕಾರಣ ಎನ್ನಬಹುದು.
* ಯಾವ ಗ್ರಾಮದಲ್ಲಿ ನಿವೇಶನಗಳ ಕೊರತೆ ಇದೆ, ಆಯಾ ಗ್ರಾಮದಲ್ಲಿ ಸರ್ಕಾರದಿಂದ ಜಮೀನು ಖರೀದಿಸಿ ಲೇಔಟ್ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು.
* ಕನಕಪುರದಂತೆ ನಗರದ ಸಮೀಪೂ ಕನಿಷ್ಠ ನೂರು ಎಕರೆ ಜಾಗದಲ್ಲಿ ನಿವೇಶನ ಹಂಚುವುದು.
* ತಾಲೂಕಿನಲ್ಲಿ ಕನಿಷ್ಠ 10 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡುವುದು.
* ಕಾವೇರಿ ನಿಗಮದಿಂದ ಕೆನಾಲ್ ಅಭಿವೃದ್ಧಿಗೊಳಿಸಿ, ನೀರು ಹರಿಸುವುದು.
* ತಾಲೂಕಿನಲ್ಲಿ ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ಕಟ್ಟಲು ವ್ಯವಸ್ಥೆ ಮಾಡಿಕೊಡುವುದು.
* ವ್ಯವಸಾಯ, ವ್ಯಾಪಾರ ಹಾಗೂ ಪಂಪ್‌ಸೆಟ್ ಅಳವಡಿಕೆಗೆ 50 ಸಾವಿರ ರೂ. ಸಹಾಯಧನದೊಂದಿಗೆ ಒಂದು ಲಕ್ಷ ರೂ., ಸಾಲ ಸೌಲಭ್ಯ ಕಲ್ಪಿಸುವುದು.
* ಪ್ರತಿ ಜಿಪಂ ವ್ಯಾಪ್ತಿಯ ಮೂಲ ಸವಲತ್ತುಗಳಿಗೆ ನೂರು ಕೋಟಿ ರೂ. ವಿಶೇಷ ಅನುದಾನ ನೀಡುವುದು.
ಹಲವು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಚ್ಚರಿಯ ಮತಗಳಿಕೆ ಆಗಿದೆ. ಇದು ಕಾಂಗ್ರೆಸ್ ನಾಯಕರಿಗೆ ಕ್ಷೇತ್ರದ ಮೇಲೆ ವಿಶ್ವಾಸ ಮೂಡಲು ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ 85 ಸಾವಿರಕ್ಕೂ ಹೆಚ್ಚು ಮತ ಚಲಾವಣೆಯಾಗಿದ್ದು, ಮುಂಬರುವ ಉಪಚುನಾವಣೆಯಲ್ಲಿ ತಮ್ಮ ಮತಬ್ಯಾಂಕ್ ಹೆಚ್ಚಿಸಿಕೊಳ್ಳುವ ಯೋಜನೆ ಕಾಂಗ್ರೆಸ್ ನಾಯಕರದ್ದಾಗಿದೆ. ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಈಗಾಗಲೇ ಮೂರು ಕ್ಷೇತ್ರದಲ್ಲಿ ತಮ್ಮ ಪಕ್ಷದ ಶಾಸಕರಿದ್ದು, ಮುಂಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಆಶಯ ಡಿ.ಕೆ.ಶಿವಕುಮಾರ್ ಅವರದ್ದಾಗಿದೆ.