ಬಸ್ ಸ್ಟ್ಯಾಂಡ್ ಪೂರ್ಣಗೊಳ್ಳುವುದೇ?

busstand
ಹೆಬ್ರಿಯಲ್ಲಿ ನಿರ್ಮಾಣವಾಗುತ್ತಿರುವ ಬಸ್ ತಂಗುದಾಣ
Published on

ನರೇಂದ್ರ ಎಸ್. ಮರಸಣಿಗೆ ಹೆಬ್ರಿ

ಹೆಬ್ರಿ ತಾಲೂಕಿನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಆಮೆನಡಿಗೆಯಿಂದ ಸಾಗುತ್ತಿದ್ದು, ಪ್ರಮುಖ ತಂಗುದಾಣ ಉದ್ಘಾಟನೆಗೊಳ್ಳಬಹುದೇ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿಸಿದೆ.

ನಿಲ್ದಾಣ ನಿರ್ಮಾಣಕ್ಕಾಗಿ 7 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದ್ದು, 1.80 ಕೋಟಿ ರೂ. ಅನುದಾನ ಮಾತ್ರ ಮಂಜೂರಾಗಿದೆ. ಈ ಪೈಕಿ 33 ಲಕ್ಷ ರೂ. ಕೈ ಸೇರಲು ಬಾಕಿ ಇದ್ದು, ಸೂಕ್ತ ಯೋಜನೆ ರೂಪಿಸದೇ ಇರುವುದರಿಂದ ಸಮಸ್ಯೆಯಾಗಿದೆ.

ಆಡಳಿತಾತ್ಮಕ ಅನುಮೋದನೆ ಪಡೆಯದ ಕಾಮಗಾರಿಗೆ ಮಂಜೂರಾಗಿರುವ ಅನುದಾನ ಸ್ಥಗಿತಗೊಳಿಸಲು ಸರ್ಕಾರ ನಿಯಮ ರೂಪಿಸಿದ್ದರಿಂದ 50 ಲಕ್ಷ ರೂ. ಅನುದಾನ ವಾಪಸ್ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದೆ.

ಭೂಮಿ ಪೂಜೆ

ಸುಮಾರು 1.5 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುವ ಕುರಿತು ಯೋಜನೆ ರೂಪಿಸಲಾಗಿದ್ದು, ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದರು.

ಬಸ್ ನಿಲ್ದಾಣದಲ್ಲಿ ಸಮರ್ಪಕ ವ್ಯವಸ್ಥೆಗಳು ಕಲ್ಪಿಸಬೇಕಾದರೆ ಸುಮಾರು ಎರಡು ಕೋಟಿ ರೂ. ಅನುದಾನ ಅಗತ್ಯವಿದೆ. ಸದ್ಯ ಇರುವ ನಿಲ್ದಾಣ ಸಣ್ಣದಿರುವುದರಿಂದ ಬಸ್‌ಗಳ ನಿಲುಗಡೆಗೆ ಸ್ಥಳವಿಲ್ಲದಾಗಿದ್ದು, ಜನಸಂದಣಿಯೂ ಹೆಚ್ಚಾಗುತ್ತದೆ. ಶೀಘ್ರವೇ ಹೆಬ್ರಿ ತಾಲೂಕಿನ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೀಗಿದೆ ಕ್ರಿಯಾಯೋಜನೆ

ಸಮತಟ್ಟು ಹಾಗೂ ಫಾರ್ಮೇಶನ್ 40 ಲಕ್ಷ ರೂ., ನೆಲಅಂತಸ್ತು ನಿರ್ಮಾಣಕ್ಕೆ 1.7 ಕೋಟಿ ರೂ., ಕಾಂಕ್ರೀಟ್‌ಗೆ 2 ಕೋಟಿ ರೂ., ಚರಂಡಿ ವ್ಯವಸ್ಥೆಗೆ 40 ಲಕ್ಷ ರೂ., ಇಲೆಕ್ಟ್ರಿಕಲ್ ಕೆಲಸಕ್ಕೆ 40 ಲಕ್ಷ ರೂ. ಹಾಗೂ ಪ್ಲಂಬಿಂಗ್ ಕೆಲಸಕ್ಕೆ 20 ಲಕ್ಷ ರೂ. ಸಹಿತ ಹಲವು ಕಾಮಗಾರಿಗಳಿಗೆ ಅನುದಾನ ಅಗತ್ಯವಿದೆ. ಮೊದಲನೇ ಮಹಡಿ ಕೆಲಸಕ್ಕೆ 1.3 ಕೋಟಿ ರೂ., ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆಗೆ ಸುಮಾರು 80 ಲಕ್ಷ ರೂ. ಸೇರಿ ಸುಮಾರು 7 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಲಾಗಿತ್ತು.

ಹೆಬ್ರಿ ಬಸ್ ನಿಲ್ದಾಣ ಬಗ್ಗೆ ನನಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಸಮರ್ಪಕ ಯೋಜನೆ ರೂಪಿಸದಿರುವುದರಿಂದ ಅನುದಾನದ ಸಮಸ್ಯೆಯಾಗಿದೆ. ಅನುದಾನ ಪಡೆಯುವ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ.-ಡಾ.ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ

ಬಸ್ ನಿಲ್ದಾಣದ ಸಂಪೂರ್ಣ ಕಾಮಗಾರಿಗೆ ಸುಮಾರು 2 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಸದ್ಯಕ್ಕೆ 1.80 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ 33 ಲಕ್ಷ ಇನ್ನೂ ಕೈ ಸೇರಬೇಕಿದೆ. 7 ಕೋಟಿ ರೂ.ವಿನ ಡಿಪಿಆರ್ ರಚನೆ ಮಾಡಲಾಗಿದೆ. ಇನ್ನು ಹಲವಾರು ಕಾಮಗಾರಿಗಳು ಬಾಕಿ ಇವೆ.-ವಿಜಯ ಶೆಟ್ಟಿ, ಇಂಜಿನಿಯರ್ ನಿರ್ಮಿತಿ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net