

ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ
ಮಾಗಡಿ
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ನನ್ನ ಬಳಿ ಯಾವುದೇ ಚರ್ಚೆ ನಡೆದಿಲ್ಲ. ಕಾಂಗ್ರೆಸ್ ನಾಯಕರು ತೀರ್ಮಾನಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯ ಕಾರ್ಯಕರ್ತನಾಗಿ ಏನೆಲ್ಲ ತಯಾರಿ ಮಾಡಬೇಕು ಅದನ್ನು ಮಾಡುತ್ತೇವೆ ಎಂದರು.
ನನಗಾಗಿ ಡಿ.ಕೆ.ಶಿವಕುಮಾರ್ ಕನಕಪುರವನ್ನು ತ್ಯಾಗಮಾಡುತ್ತಾರೆ ಎಂಬ ವಿಚಾರ ಮಾಧ್ಯಮಗಳ ಸೃಷ್ಟಿ. ಇದರಿಂದಾಗಿ ನಾನು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧೆಮಾಡುವುದಿಲ್ಲ. ಜನತೆ ವಿಶ್ರಾಂತಿ ನೀಡಿದ್ದಾರೆ ವಿಶ್ರಾಂತಿ ಪಡೆಯುತ್ತೇನೆ. ಒತ್ತಡದಿಂದ ಹೊರಬಂದಿದ್ದೇನೆ ಎಂದರು.
ಗ್ಯಾರಂಟಿಗಳಿಂದ ನಾಲ್ಕು ವರ್ಷದಲ್ಲಿ ಪ್ರತಿ ಕುಟುಂಬದ ಜೀವನ ಶೈಲಿ ಬದಲಾವಣೆಯಾಗಿ ರಾಷ್ಟ್ರಕ್ಕೆ ಮಾದರಿಯಾಗಿರುವ ರೀತಿ ಆರ್ಥಿಕ ಚೈತನ್ಯ ಮೂಡಿಸುತ್ತದೆ ಎಂದರು.
ವೈಯಕ್ತಿಕ ತೀರ್ಮಾನ
ಚನ್ನಪಟ್ಟಣಕ್ಕೆ ಯಾರೇ ಅಭ್ಯರ್ಥಿಯಾದರು ನಾನೇ ಅಭ್ಯರ್ಥಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪಕ್ಷ ಅವರನ್ನೇ ಅಭ್ಯರ್ಥಿ ಎಂದು ತೀರ್ಮಾನಿಸಿದರೆ ನಿಂತುಕೊಳ್ಳಲಿ. ಅದು ಅವರ ವೈಯಕ್ತಿಕ ತೀರ್ಮಾನ ಎಂದು ಸುರೇಶ್ ಹೇಳಿದರು.