ಅಭಿವೃದ್ಧಿ ಪರ್ವಕ್ಕೆ ಸಾಕ್ಷಿಯಾಗಲಿದೆಯೇ ಮಾಗಡಿ?

magadi ranganathaswamy
Published on

* ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ, ರಿಂಗ್ ರಸ್ತೆ ಅಭಿವೃದ್ಧಿ, ನಮ್ಮ ಮೆಟ್ರೋ ಯೋಜನೆ ಜಾರಿ ನಿರೀಕ್ಷೆ

ಮಾಗಡಿ

ಸರ್ಕಾರದ ಸಾಕಷ್ಟು ಯೋಜನೆಗಳನ್ನು ಮಾಗಡಿ ತಾಲೂಕಿನ ಸುತ್ತಮುತ್ತಲೇ ಅನುಷ್ಠಾನ ಮಾಡಲು ಮುಂದಾಗಿರುವುದು ಈ ಭಾಗದ ಅಭಿವೃದ್ಧಿ ರೂಪುರೇಷೆಯೇ ಬದಲಾಗುವ ಮುನ್ಸೂಚನೆ ಇದೆ.

ಹೌದು... ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ, ರಿಂಗ್ ರಸ್ತೆ ಅಭಿವೃದ್ಧಿ, ನಮ್ಮ ಮೆಟ್ರೋ, ಉಪನಗರ ಯೋಜನೆಗೆ ತಾಲೂಕು ವ್ಯಾಪ್ತಿ ಒಳಪಡುವುದು ಬಹುತೇಕ ನಿಕ್ಕಿಯಾಗಿದ್ದು, ಈ ಭಾಗದ ಅಭಿವೃದ್ಧಿಯ ದಿಕ್ಕುದೆಸೆ ಬದಲಾಗುವ ನಿರೀಕ್ಷೆ ಹೆಚ್ಚಿಸಿದೆ.

ಅನ್ನದಾತರಲ್ಲಿ ಆತಂಕ :

ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ಕೇಂದ್ರದ ವರ್ತುಲ ರಸ್ತೆ, ವರ್ತುಲ ರೈಲ್ವೆ, ಉಪನಗರ ಯೋಜನೆಯ ಜತೆಗೆ ವಿಮಾನ ನಿಲ್ದಾಣದ ಸರ್ವೇ ನಡೆಯುತ್ತಿರುವುದು ಅನ್ನದಾತರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಮನೆಮಾಡಿದೆ.

ಯಾವ್ಯಾವ ಯೋಜನೆ?

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ದ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಬೆಂಗಳೂರಿನ ಹೊರ ಭಾಗದ ಸುತ್ತ ರಿಂಗ್ ರಸ್ತೆ ಅಭಿವೃದ್ಧಿಗೆ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ಅನುಮೋದನೆ ಪಡೆದು ಸರ್ವೇ ಪ್ರಗತಿಯಲ್ಲಿದೆ. ಇದರೊಂದಿಗೆ ನಮ್ಮ ಮೆಟ್ರೋ ಯೋಜನೆಗೆ ಪೂರಕವಾಗಿ 287 ಕಿಮೀ ಸುತ್ತಳತೆಯ ವ್ಯಾಪ್ತಿಗೆ ಬರುವ ಮಾಗಡಿ ತಾಲೂಕಿನ ಸೋಲೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಡವಂದ, ದೊಡ್ಡಬಳ್ಳಾಪುರ, ದೇವನಹಳ್ಳಿ, ಕೋಲಾರ ಜಿಲ್ಲೆಯ ಮಾಲೂರು, ಬೆಂಗಳೂರು ದಕ್ಷಿಣ ವ್ಯಾಪ್ತಿಯ ಹೆಜ್ಜಾಲ ನಗರಗಳನ್ನು ಸುತ್ತುವರಿದು ರಿಂಗ್ ರೈಲು ಓಡಿಸಲು ಯೋಜನೆ, ಜತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೋಲೂರನ್ನು ಉಪನಗರ ಮಾಡಲು ಸರ್ವೇ ನಡೆಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ಪ್ರಮುಖ ಸ್ಥಳ

ಮೆಟ್ರೋ ನೆಲಮಂಗಲಕ್ಕೆ ಬರಲಿದ್ದು, ಮುಂದೆ ಸೋಲೂರಿಗೂ ಬರುವ ನಿರೀಕ್ಷೆ ಇದೆ.ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ ಹಾದು ಹೋಗಿರುವುದು, ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ಸೋಲೂರಿನಿಂದ ಹತ್ತಿರ ಇರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರಾದ ವೀರಾಪುರ ಹಾಗೂ 111 ಅಡಿ ಎತ್ತರದ ಪುತ್ಥಳಿ, ಬಂಡೇಮಠ, ಗದ್ದುಗೆಮಠ, ಜಗಣಯ್ಯನ ಮಠ, ಪಾಲನಹಳ್ಳಿ ಮಠ, ಚಿಲುಮೆ ಮಠ ಪ್ರಮುಖವಾಗಿದೆ. ಅಲ್ಲದೆ, ನಾಡಪ್ರಭು ಕೆಂಪೇಗೌಡರ ನಾಡು ಮಾಗಡಿ ಎಂಬ ಹೆಗ್ಗಳಿಕೆ ಇರುವ ತಾಲೂಕಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಂಪೇಗೌಡರ ಹೆಸರೇ ಇಲ್ಲೂ ಗರ್ಜಿಸಲಿದೆ.

ಸೋಲೂರು ಹೋಬಳಿ ತೀರ ಹಿಂದುಳಿದು ಅಭಿವೃದ್ಧಿ ಕುಂಠಿತವಾಗಿತ್ತು. ವಿಮಾನ ನಿಲ್ದಾಣ ಈ ಭಾಗದಲ್ಲಿ ಆಗುವುದರಿಂದ ಹೋಬಳಿ ಅಭಿವೃದ್ಧಿಗೊಳ್ಳಲಿದೆ ಎಂಬ ವಿಶ್ವಾಸವಿದೆ.ಎಸ್‌ಸಿಬಿಎಸ್ ಮಂಜುನಾಥ್ ಕನ್ನಸಂದ್ರ ಡೇರಿ ಮಾಜಿ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net