ಕೈ ಹಿಡಿಯುವುದೇ ಗ್ಯಾರಂಟಿ?

Bangalore Rural
Published on

ಮಹಿಳಾ ಮತದಾರರ ಚಿತ್ತದತ್ತ ಜೋರಾದ ಚರ್ಚೆ

ಬೆಂಗಳೂರಿಗರ ಒಲವು ಯಾರತ್ತ ಎಂಬುದೇ ಚಿಂತೆ

ಗಂಗಾಧರ್ ಬೈರಾಪಟ್ಟಣ ರಾಮನಗರ


ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎನ್ನುವ ಗಾದೆ ಮಾತಿನಂತೆ ಮತದಾನ ನಡೆದ ಐದು ದಿನ ಕಳೆದರೂ ಎಲ್ಲರಿಗೂ ಚುನಾವಣೆ ಫಲಿತಾಂಶದ ಮೇಲೆಯೇ ಕಣ್ಣು, ಅದರಲ್ಲೂ ಈ ಬಾರಿ ಮಹಿಳಾ ಮತದಾರರ ಒಲವು ಯಾರ ಕಡೆಗೆ ಎನ್ನುವ ಚರ್ಚೆ ಜೋರಾಗಿಯೇ ನಡೆದಿದೆ.


ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಮಹಿಳಾ ಮತದಾರರು ಕೈ ಪರವಾಗಿ ಇದ್ದಾರೆ ಎನ್ನುವ ವಿಶ್ವಾಸ ಕಾಂಗ್ರೆಸ್‌ನದ್ದಾಗಿದ್ದರೆ, ಅತ್ತ ಬಿಜೆಪಿ - ಜೆಡಿಎಸ್ ವಾದವೇ ವಿಭಿನ್ನ. ಈ ಯೋಜನೆಗಳಿಂದ ನೊಂದ ಯುವ ಸಮುದಾಯ ಹಾಗೂ ಕುಟುಂಬದ ಇತರ ಮಹಿಳಾ ಸದಸ್ಯರು ಕಾಂಗ್ರೆಸ್‌ಗೆ ಮತ ಹಾಕಿಲ್ಲ. ಇದು ಬಿಜೆಪಿಗೆ ಪ್ಲಸ್ ಆಗಲಿದೆ ಎನ್ನುವುದು ಅವರ ಲೆಕ್ಕಾಚಾರ.

ಗ್ರಾಮಾಂತರದ ವಿವರ:


ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಮುಂಚೂಣಿಯಲ್ಲಿ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಲಿ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್‌ನಿಂದ, ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಎನ್‌ಡಿಎ ಹುರಿಯಾಳಾಗಿದ್ದರಿಂದ ಕ್ಷೇತ್ರ ರಾಜ್ಯ ಮತ್ತು ದೇಶದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಶೇಕಡಾವಾರು ಲೆಕ್ಕಾಚಾರದಲ್ಲಿ ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ. ಒಟ್ಟು 1377570 ಮಹಿಳಾ ಮತದಾರರಲ್ಲಿ 950921 ಮಂದಿ ಮತಚಲಾವಣೆ ಮಾಡಿದ್ದರು, ಶೇ.69 ಮತದಾನ ಆಗಿದೆ. ಇದರಿಂದ ಈ ಬಾರಿ ಮಹಿಳೆಯರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎನ್ನುವುದು ಆ ಪಕ್ಷದ ಮುಖಂಡರ ವಾದ.

ನಗರದ್ದೇ ಕಾತರ


ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿದ್ದರೂ, ಈ ಕ್ಷೇತ್ರಗಳ ಮತದಾರರು ಯಾರ ಪರ ಒಲವು ವ್ಯಕ್ತಪಡಿಸಿದ್ದಾರೆ ಎನ್ನುವ ಕಾತರ ಎಲ್ಲರಲ್ಲೂ ಇದೆ. ಪ್ರತಿ ಚುನಾವಣೆಯಲ್ಲಿಯೂ ಈ ಮೂರು ಕ್ಷೇತ್ರಗಳಲ್ಲಿ ಹೆಚ್ಚಿನ ಪಾಲು ಬಿಜೆಪಿಗೆ ಮತಗಳು ಬಂದಿವೆ.

ಕಳೆದ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣದಲ್ಲಿ ಒಟ್ಟು 75 ಸಾವಿರ ಹೆಚ್ಚು ಮತಗಳು ಬಿಜೆಪಿಗೆ ಬಂದಿದ್ದರೆ ಆನೇಕಲ್‌ನಲ್ಲಿ ಕೇವಲ 1800 ಮತಗಳ ಮುನ್ನಡೆ ಕೈಗೆ ದೊರೆತಿತ್ತು. ಈ ಬಾರಿ ಮತದಾನ ಪ್ರಮಾಣ ಜಾಸ್ತಿ ಆಗಿರುವ ಕಾರಣ ಇಲ್ಲಿನ ಮತದಾರರು ಯಾರ ಕಡೆ ವಾಲಿದ್ದಾರೋ ಅವರ ಗೆಲುವು ನಿಶ್ಚಿತ ಎನ್ನುವ ಚರ್ಚೆಗಳು ನಡೆದಿವೆ.

50 ಸಾವಿರದಲ್ಲಿ ಡಾಕ್ಟರ್‌ಗೆ ಗೆಲುವು?

b rural

ವಿಭಿನ್ನ ಆಯಾಮಗಳಲ್ಲಿ ಲೆಕ್ಕಾಚಾರ ಹಾಕುತ್ತಿರುವ ಮತದಾರರು, ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರ ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆಯಲಿದ್ದಾರೆ ಎನ್ನುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು, ಸಂಸದ ಡಿ.ಕೆ.ಸುರೇಶ್ ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ನಾಲ್ಕನೇ ಬಾರಿಗೆ ಸಂಸದರಾಗಲಿದ್ದಾರೆ. ಬೆಂಗಳೂರು ನಗರ ಪ್ರದೇಶದ ಜನರ ಒಲವು ಸಹ ಇವರಿಗೆ ದೊರೆತಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಮಹಿಳಾ ಮತದಾರರ ವಿವರ
ಕ್ಷೇತ್ರ          ಮತದಾರರು   ಚಲಾವಣೆ   ಶೇಕಡ
ಕುಣಿಗಲ್      101716      85887    84.43
ಆರ್‌ಆರ್‌ನಗರ 245900    142263   57.85
ಬೆಂ.ದಕ್ಷಿಣ     357352    204445    57.21
ಆನೇಕಲ್     208886     125657    60.15
ಮಾಗಡಿ      119462      100394    84.03
ರಾಮನಗರ   112740        93885   83.27
ಕನಕಪುರ     117836       98492    83.58
ಚನ್ನಪಟ್ಟಣ    119678      99898     83.47
ಒಟ್ಟು         1377570      950921  69.02

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net