ಮಂಗಳವಾರದಿಂದ ಮರುಜಾರಿ ಆಗುತ್ತಾ ಲಾಕ್‌ಡೌನ್? ನಾಳೆ ಸಿಎಂ ಮಹತ್ವದ ಸಭೆ

Yediyurappa 20 april 20
Yediyurappa
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಕರೊನಾ ಹಾವಳಿಗೆ ಬ್ರೇಕ್ ಹಾಕಲು ಲಾಕ್‌ಡೌನ್ ಮರುಜಾರಿ ಮಾಡಬೇಕೆ ಅಥವಾ ಹಾಫ್ ಲಾಕ್‌ಡೌನ್ ಮಾಡಬೇಕೆ ಎಂಬುದು ನಾಳೆ ಸಂಜೆ ನಿರ್ಧಾರವಾಗಲಿದೆ.

ಕರೊನಾ ಸೋಂಕು ನಿರೀಕ್ಷೆಗೂ ಮೀರಿ ವ್ಯಾಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸಂಜೆ 4ಕ್ಕೆ ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ತುರ್ತು ಸಭೆ ಕರೆದಿದ್ದಾರೆ. ಇದರಲ್ಲಿ ಬೆಂಗಳೂರಿಗೆ ಸಂಬಂಧಿಸಿದ ಶಾಸಕರು ಹಾಗೂ ಸಂಸದರು ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಒಂದೇ ದಿನ 1235 ಜನರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಸಾವಿರಕ್ಕೂ ಹೆಚ್ಚು ಜನ ಸೋಂಕು ಹೊಂದುತ್ತಿರುವುದು ಇತ್ತೀಚೆಗೆ ಪ್ರತಿದಿನ ಮಾಮೂಲಿಯಾಗಿಬಿಟ್ಟಿದೆ. ಇದನ್ನೂ ಓದಿ: ವಿದ್ಯುತ್​ಗೂ ತಗುಲಿದ ‘ಕರೊನಾ ಸೋಂಕು’

ಕರೊನಾ ಮಿತಿ ಮೀರುತ್ತಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಸುವುದು ತಲೆನೋವಾಗಿದೆ. ಈ ಸಂಬಂಧ ಮಾರ್ಗಸೂಚಿ ಹೊರಡಿಸಿ, ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ. ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಅಂತ್ಯಸಂಸ್ಕಾರಕ್ಕೆಂದೇ ಪ್ರತ್ಯೇಕ ಜಾಗ ಗುರುತಿಸಲಾಗಿದೆ. ಆದಾಗ್ಯೂ ಅನೇಕ ಎಡವಟ್ಟುಗಳು ಸಂಭವಿಸುತ್ತಿವೆ. ಈ ವಿಷಯವನ್ನೂ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳಿಲ್ಲ, ಜನಸಾಮಾನ್ಯರ ಪಾಡು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ರೋಗಿಗಳ ಸುಲಿಗೆ, ಚಿಕಿತ್ಸೆ ನಿರಾಕರಣೆ, ಕ್ವಾರಂಟೈನ್ ನಿಯಮ ಉಲ್ಲಂಘನೆ, ಜನರಲ್ಲಿ ಸೋಂಕು ಕುರಿತು ಇನ್ನಷ್ಟು ಜಾಗೃತಿ, ಕಾನೂನು ಉಲ್ಲಂಘನೆ ಗಂಭೀರವಾಗಿ ಪರಿಗಣಿಸುವುದು ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ. ಈ ಸಭೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು, ಸಂಸದರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net