

ಬೇಲೂರು: ಕಾಡಾನೆಗಳ ಹಾವಳಿಯಿಂದಾಗಿ ರೈತರು ಗದ್ದೆಯಲ್ಲಿ ಮಡಿ ಮಾಡಿದ್ದ ಭತ್ತದ ಗದ್ದೆಯನ್ನು ತುಳಿದು, ತಿಂದು ಹಾಳು ಮಾಡಿರುವ ಘಟನೆ ತಾಲೂಕಿನ ಅರೇಹಳ್ಳಿ ಹೋಬಳಿಯ ಕಣದೂರು ಹಾಗೂ ಕುಪ್ಪಗೋಡು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಹಿಂಡು ಹಿಂಡಾಗಿ ಕಾಣಿಸುತ್ತಿರುವ ಕಾಡಾನೆಗಳು ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ 40 ಕ್ಕೂ ಹೆಚ್ಚಿನ ಕಾಡಾನೆಗಳು ಬೀಡು ಬಿಟ್ಟಿವೆ. ಈ ಪೈಕಿ ಚೀಕನಹಳ್ಳಿಯ ಮಾಜಿ ಶಾಸಕ ದಿ.ವೈ.ಎನ್.ರುದ್ರೇಶ್‌ಗೌಡ ಹಾಗೂ ವಕೀಲ ಪ್ರಭಾಕರ್ ತೋಟದಲ್ಲಿರುವ 15 ಆನೆಗಳ ಹಿಂಡು ಸಮೀಪದ ಕಾಫಿ ತೋಟದಲ್ಲಿನ ಬೆಳೆ ಸೇರಿದಂತೆ ಕಣದೂರು ಹಾಗೂ ಕುಪ್ಪಗೋಡು ಗ್ರಾಮದಲ್ಲಿ ಭತ್ತದ ಗದ್ದೆಗಳಲ್ಲಿ ಮಡಿ ಮಾಡಿದ್ದ ಸಸಿಗಳನ್ನು ತಿಂದು, ತುಳಿದು ನಾಶ ಪಡಿಸಿವೆ.
ಇದರಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕಳೆದ ಒಂದು ವಾರದಿಂದ ಈ ಗ್ರಾಮಗಳ ಆಸುಪಾಸಿನಲ್ಲೇ ಕಾಡಾನೆಗಳು ಬೀಡು ಬಿಟ್ಟಿವೆ. ಜೋರಾಗಿ ಬರುತ್ತಿರುವ ಮಳೆಯ ನಡುವೆಯೇ ಆನೆಗಳ ಉಪಟಳ ಹೇಳ ತೀರದಾಗಿದೆ. ಆದ್ದರಿಂದ ಬೆಳೆ ಹಾನಿ ಮಾಡುತ್ತಿರುವ ಆನೆಗಳನ್ನು ಶೀಘ್ರವೇ ದೂರದ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಯತೀಶ್ ಮಾತನಾಡಿ, ಕಳೆದ ಕೆಲ ದಿನಗಳಿಂದ ಚೀಕನಹಳ್ಳಿ ಸಮೀಪದ ತೋಟಗಳಲ್ಲೇ ಕಾಡಾನೆಗಳು ಬೀಡು ಬಿಟ್ಟಿವೆ. ಸಂಜೆಯಾಗುತ್ತಿದ್ದಂತೆ ಗದ್ದೆ, ತೋಟಗಳಿಗೆ ದಾಳಿ ಮಾಡುತಿದ್ದು, ಈಗಾಗಲೇ ನಷ್ಟಕ್ಕೊಳಗಾದ ರೈತರ ಜಮೀನಿಗೆ ಭೇಟಿನೀಡಿ ಪರಿಶೀಲಿಸಿದ್ದು, ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.