ನಿಡಘಟ್ಟದ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು

MDR Elephant
ನಿಡಘಟ್ಟದ ತೋಟವೊಂದರಲ್ಲಿ ಸೋಮವಾರ ಬೀಡು ಬಿಟ್ಟಿರುವ ಕಾಡಾನೆಗಳು.
Published on

ಮದ್ದೂರು: ಕಾಡಿನಿಂದ ನಾಡಿಗೆ ಆಗಮಿಸಿದ ಎರಡು ಆನೆಗಳು ಸ್ಥಳೀಯರು ಮತ್ತು ರೈತರಲ್ಲಿ ಆತಂಕ ಮೂಡಿಸಿವೆ.

ತಾಲೂಕಿನ ನಿಡಘಟ್ಟ ಗ್ರಾಮದ ಅಣ್ಣೇಗೌಡ ಎಂಬವರ ತೋಟದಲ್ಲಿ ಸೋಮವಾರ ಬೀಡು ಬಿಟ್ಟಿರುವ ಎರಡು ಗಂಡಾನೆಗಳು ತೈಲೂರು ಕೆರೆಯಲ್ಲಿ ಜಲ ಕ್ರೀಡೆ ಆಡಿವೆ. ಬಳಿಕ ಅಕ್ಕ ಪಕ್ಕದ ಗ್ರಾಮಗಳ ಮೂಲಕ ನಿಡಘಟ್ಟ ಗ್ರಾಮಕ್ಕೆ ಆಗಮಿಸಿವೆ. ನೆರೆಯ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೊರಣಗೆರೆ ಕಾಡಿನಿಂದ ಆಗಮಿಸಿವೆ ಎನ್ನಲಾದ 35 ವರ್ಷದ ಎರಡು ಕಾಡಾನೆಗಳು ಹುಣಸೆ ಮರದ ದೊಡ್ಡಿ, ಅಗರಲಿಂಗನ ದೊಡ್ಡಿ, ಕೆ. ಕೋಡಿಹಳ್ಳಿ, ಬೂದುಗುಪ್ಪೆ ಇನ್ನಿತರ ಗ್ರಾಮಗಳನ್ನು ಕ್ರಮಿಸಿ ಬಂದಿವೆ ಎನ್ನಲಾಗಿದೆ.

ಕಾಡಾನೆಗಳು ಸಾಗಿ ಬಂದ ಮಾರ್ಗದುದ್ದಕ್ಕೂ ರೈತರ ಜಮೀನಿನಲ್ಲಿ ಬೆಳೆದಿದ್ದ ಫಸಲು (ಭತ್ತ, ಬಾಳೆ, ಕಬ್ಬು, ರೇಷ್ಮೆ ಇನ್ನಿತರ ಬೆಳೆ) ತಿಂದು ನಾಶ ಪಡಿಸಿವೆ. ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಆತಂಕ ತಿಳಿಸಿದ್ದು, ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

ಅರಣ್ಯ ಅಧಿಕಾರಿ ಗವಿಯಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಸೋಮವಾರ ಸಂಜೆ ಬಳಿಕ ಕಾರ್ಯಾಚರಣೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಹುಣಸೂರು ಆನೆ ಕಾರ್ಯಪಡೆ ತಂಡ ಆಗಮಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಕಾರ್ಯಾಚರಣೆ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ನಡೆಸಿದೆ ಎಂದರು.

ಆನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ರೈತರು, ಗ್ರಾಮಸ್ಥರು ಮನೆಯಿಂದ ಹೊರಬರದಂತೆ ಈಗಾಗಲೇ ಇಲಾಖೆ ಅಧಿಕಾರಿಗಳು ಮೈಕ್ ಮೂಲಕ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ. ಬೆಳೆ ನಷ್ಟ ಹೊಂದಿರುವ ರೈತರ ಜಮೀನುಗಳನ್ನು ಮಂಗಳವಾರ ಪರಿಶೀಲಿಸಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಲಾಗಿದೆ ಎಂದರು. ಉಪ ವಲಯ ಅರಣ್ಯ ಅಧಿಕಾರಿ ಮಲ್ಲೇಶ ನಾಯಕ್, ಸಿಬ್ಬಂದಿ ಕಾಂತರಾಜು, ಸುದರ್ಶನ್ ಕಾರ್ಯಾಚರಣೆ ತಂಡದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net