

ಚನ್ನಪಟ್ಟಣ
ಒಂಟಿಸಲಗವೊಂದು ಗ್ರಾಮದೊಳಗೆ ಓಡಾಟ ನಡೆಸಿ ಗ್ರಾಮಸ್ಥರನ್ನು ಭಯಭೀತಗೊಳಿಸಿರುವ ಘಟನೆ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ರಾತ್ರಿ ೧೧ ರ ಸುಮಾರಿನಲ್ಲಿ ಗ್ರಾಮದಲ್ಲಿ ಈ ಒಂಟಿಸಲಗ ಪ್ರತ್ಯಕ್ಷಗೊಂಡಿದ್ದು, ಗ್ರಾಮದ ಶಿವಮಲ್ಲೇಗೌಡ, ತಿಮ್ಮೇಗೌಡ, ಜಯಮುದ್ದಣ್ಣ ಸೇರಿದಂತೆ ಹಲವರ ಹಿತ್ತಲಿನಲ್ಲಿದ್ದ ಗಿಡಮರ ಹಾಗೂ ಕೃಷಿ ಸಲಕರಣೆಗಳನ್ನು ನಾಶಪಡಿಸಿದೆ.
ಗ್ರಾಮದ ಒಳಗೆ ಬಂದ ಗಜರಾಯನನ್ನು ಕಂಡು ಗ್ರಾಮದ ಜನತೆ ಭಯಭೀತಗೊಂಡಿದ್ದಾರೆ. ಗ್ರಾಮಸ್ಥರೊಬ್ಬರು ತಮ್ಮ ಮನೆಯ ಹಿಂಭಾಗ ಅಡ್ಡಾಡುತ್ತಿದ್ದ ಒಂಟಿಸಲಗವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಗ್ರಾಮದೊಳಗೆ ಆನೆಯ ಆಗಮನದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಓಡಿಸುವ ಯತ್ನ ಮಾಡಿದ್ದಾರೆ.
ಇಷ್ಟು ದಿನ ಕೇವಲ ರೈತರ ಜಮೀನುಗಳ ಮೇಲಷ್ಟೇ ದಾಳಿ ನಡೆಸುತ್ತಿದ್ದ ಕಾಡಾನೆಗಳು, ಇದೀಗ ರೈತರ ಮನೆಯ ಬಳಿಯೂ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.