

ರಾಮನಗರ: ಕುರಿಗಾಯಿಯ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿರುವ ಘಟನೆ ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿಯ ಹೊನ್ನಿಗನಹಳ್ಳಿ ಬಳಿ ನಡೆದಿದೆ.
ಗ್ರಾಮದ ಮರೀಗೌಡ (65) ಮೃತಪಟ್ಟ ವ್ಯಕ್ತಿ. ಶನಿವಾರ ಮಧ್ಯಾಹ್ನ ಮುಗ್ಗೂರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಕಾಡಿನಿಂದ ಬಂದ ಆನೆ ಏಕಾಏಕಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಮರೀಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುತ್ತಮುತ್ತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರು ಆನೆ ದಾಳಿಯನ್ನು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
ಆರ್.ಎಫ್.ಒ ರವಿಕುಮಾರ್ ಮತ್ತು ಸಿಬ್ಬಂಧಿಗಳು ಸ್ಥಳ ಪರಿಶೀಲಿಸಿ ಮೃತ ದೇಹವನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.