

ಗುಂಡ್ಲುಪೇಟೆ: ಬಂಡೀಪುರದಲ್ಲಿ ಕಾಡಾನೆಯೊಂದು ಹಣ್ಣು ತರಕಾರಿ ಲಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಂಜೆ 6 ಗಂಟೆ ನಂತರ ಲಾರಿಗಳ ಸಂಚಾರ ನಿರ್ಬಂಧಿಸಲು ಅರಣ್ಯ ಇಲಾಖೆ ಮುಂದಾಗಿದೆ.
ತಮಿಳುನಾಡಿನ ದಿಂಬಂ ಘಾಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಆನೆಯೊಂದು ಬಂಡೀಪುರಕ್ಕೆ ವಲಸೆ ಬಂದಿದೆ. ಈ ಮಾರ್ಗವಾಗಿ ಊಟಿಯತ್ತ ಸಾಗುವ ಹಣ್ಣು ಮತ್ತು ತರಕಾರಿ ಲಾರಿಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಕತ್ತಲಾಗುತ್ತಿದಂತೆ ರಸ್ತೆ ಬದಿಗೆ ಬರುವ ಆನೆ ಲಾರಿಗಳನ್ನು ತಡೆದು ಹಣ್ಣು ತರಕಾರಿಗಳನ್ನು ಹೊರಗೆಳೆದು ನಾಶ ಮಾಡುತ್ತಿದೆ. ಜತೆಗೆ ಈ ಮಾರ್ಗದಲ್ಲಿ ಪದೇ ಪದೇ ಸಂಚಾರ ಸಿಕ್ಕು ಉಂಟಾಗುತ್ತಿದೆ. ರಸ್ತೆ ಬದಿಯಲ್ಲಿ ಮೇಯುವ ಆನೆಯ ಫೋಟೋ ತೆಗೆದುಕೊಳ್ಳಲು ಪ್ರವಾಸಿಗರು ವಾಹನಗಳಿಂದ ಕೆಳಗಿಳಿಯುತ್ತಿದ್ದಾರೆ.
ಆ.3ರ ಭಾನುವಾರ ಸಂಜೆ ರಸ್ತೆ ಬದಿಯಲ್ಲಿದ್ದ ಆನೆಯ ಜತೆ ಸೆಲ್ಫಿ ತೆಗೆದುಕೊಳ್ಳಲು ಕಾರಿನಿಂದ ಕೆಳಗಿಳಿದಿದ್ದ ನಂಜನಗೂಡಿನ ಬಸವರಾಜು ಎಂಬುವರ ಮೇಲೆ ದಾಳಿ ನಡೆಸಿತ್ತು. ಇದರಿಂದ ಅರಣ್ಯ ಸಿಬ್ಬಂದಿ ಸಂಜೆಯ ನಂತರ ಗಸ್ತು ಹೆಚ್ಚಿಸಿ ಆನೆಯನ್ನು ರಸ್ತೆಗೆ ಬರದಂತೆ ಕಾವಲು ಕಾಯುವಂತಾಗಿದೆ. ಅಕಸ್ಮಾತ್ ಲಾರಿಗಳನ್ನು ಅಡ್ಡಗಟ್ಟಿದರೆ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗಟ್ಟುತ್ತಿದ್ದಾರೆ. ಕತ್ತಲಾದ ನಂತರ ಕಾರ್ಯಾಚರಣೆ ನಡೆಸುವುದು ಅರಣ್ಯ ಸಿಬ್ಬಂದಿಗೆ ಸವಾಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಂಜೆ 6 ಗಂಟೆಯ ನಂತರ ಹಣ್ಣು ಮತ್ತು ತರಕಾರಿ ಲಾರಿಗಳ ಸಂಚಾರವನ್ನು ನಿರ್ಬಂಧಿಸಲು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈಗಾಗಲೇ ರಾತ್ರಿ 9ರಿಂದ ಬೆಳಗಿನ 6 ಗಂಟೆಗಳವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಸಂಜೆ 6ರ ನಂತರ ಹಣ್ಣು ತರಕಾರಿ ಲಾರಿಗಳ ಸಂಚಾರವನ್ನು ನಿರ್ಬಂಧಿಸುವುದರಿಂದ ಹಗಲು ವೇಳೆಯಲ್ಲಿ ಹೆಚ್ಚಿನ ಟ್ರಾಫಿಕ್ ಉಂಟಾಗುವ ಸಂಭವ ಇದೆ.