

ಹನೂರು: ತಾಲೂಕಿನ ಎಂ.ಟಿ.ದೊಡ್ಡಿ ಗ್ರಾಮದಲ್ಲಿ ಗುರುವಾರ ಕಾಡು ಹಂದಿಗಳ ಹಿಂಡು ಜಮೀನಿಗೆ ನುಗ್ಗಿ ಮುಸುಕಿನ ಜೋಳದ ಫಸಲನ್ನು ನಾಶಗೊಳಿಸಿದ ಬೆನ್ನಲ್ಲೇ ಶನಿವಾರ ರಾತ್ರಿ ಮತ್ತೊಂದು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದ್ದು, ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಕಳೆದ ಹಲವು ತಿಂಗಳಿನಿಂದಲೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಜ.16 ರಂದು ಸುಮಾರು 30ಕ್ಕೂ ಹೆಚ್ಚು ಕಾಡು ಹಂದಿಗಳ ಹಿಂಡು ಗ್ರಾಮದ ಶ್ರೀನಿವಾಸ್ ಎಂಬುವರ ಜಮೀನಿಗೆ ಲಗ್ಗೆ ಇಟ್ಟು ಕಟಾವಿನ ಹಂತದಲ್ಲಿದ್ದ 2 ಎಕರೆಯಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಫಸಲನ್ನು ತಿಂದು ಹಾಗೂ ಮುರಿದು ನಾಶಪಡಿಸಿದ್ದವು. ಈ ವೇಳೆ ಹಂದಿಗಳ ಹಾವಳಿಗೆ ಕಡಿವಾಣ ಹಾಕುವಂತೆ ರೈತರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಆದರೆ, ಯಾವುದೇ ಕ್ರಮವಹಿಸದ ಪರಿಣಾಮ ಶನಿವಾರ ರಾತ್ರಿ ಇದೇ ಕಾಡು ಹಂದಿಗಳ ಹಿಂಡು ಗ್ರಾಮದ ನಿಂಗರಾಜು ಎಂಬುವರ ಜಮೀನಿಗೆ ನುಗ್ಗಿ 1 ಎಕರೆಯಲ್ಲಿನ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ. ಕಾಡು ಹಂದಿಗಳ ಕಡಿವಾಣಕ್ಕೆ ನಿರ್ಲಕ್ಷೃ ವಹಿಸಿರುವ ಅರಣ್ಯ ಇಲಾಖೆಯ ಬಗ್ಗೆ ರೈತರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ: ಈ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಜಮೀನಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ನಷ್ಟವಾಗಿರುವ ಬೆಳೆಗೆ ಪರಿಹಾರವನ್ನು ದೊರಕಿಸಿ ಕೊಡುವುದರ ಜತೆಗೆ ರಾತ್ರಿ ವೇಳೆ ಸಿಬ್ಬಂದಿಯನ್ನು ನಿಯೋಜಿಸಿ ಹಂದಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘಟನೆಯೊಂದಿಗೆ ಹನೂರಿನ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಶ್ರೀನಿವಾಸ್ ಎಚ್ಚರಿಸಿದ್ದಾರೆ.