ಕಾಡು ಹಂದಿ ನವಿಲುಗಳ ಉಪಟಳದಿಂದ ಕಂಗಾಲು

21-bidadi-2
Published on

* ಆತಂಕದಲ್ಲಿರುವ ಕಾಡಂಚಿನ ಜನರು

ವನ್ಯಜೀವಿಗಳ ಹಾವಳಿಗೆ ನಲುಗಿದ ರೈತ!

ಚೇತನ್ ಚಕ್ಕೆರೆ ಬಿಡದಿ ಕಾಡುಪ್ರಾಣಿಗಳ ಹಾವಳಿಯಿಂದ ಬಿಡದಿ ಭಾಗದ ರೈತರು ತತ್ತರಿಸಿದ್ದು, ಜಮೀನುಗಳಲ್ಲಿ ಬೆಳೆದ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ. ಕಾಡು ಹಂದಿಗಳ ಕಾಟ, ನವಿಲುಗಳ ಉಪಟಳದಿಂದ ರೈತರು ಬೇಸತ್ತಿದ್ದು, ರಾತ್ರಿಯಿಡಿ ಕಾಡು ಪ್ರಾಣಿಗಳನ್ನು ಕಾಯುವುದೇ ಕಾಯಕವಾಗಿದೆ. ಹೌದು. ರೈತರು ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಹೀಗೆ ಬೆಳೆದ ಸಲನ್ನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ತಲೆ ನೋವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಬಾನಂದೂರು, ಗೊಲ್ಲಹಳ್ಳಿ ಕೆಂಪನಹಳ್ಳಿ, ಗೋಪಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ.

ರಾತ್ರಿ ವೇಳೆ ಕಾರ್ಯಚರಣೆ

ರೈತರು ವಿದ್ಯುತ್ ಅಭಾವ ಮಳೆ ಕೊರತೆ ನಡುವೆಯೂ ಮೆಕ್ಕೆ ಜೋಳ, ಬೇಬಿ ಕಾರ್ನ್, ರಾಗಿ, ಭತ್ತ ಸೇರಿ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಫಸಲು ನೀಡುವ ಸಮಯದಲ್ಲಿ ಕಾಡು ಹಂದಿಗಳು ಬೆಳೆಗಳ ಮೇಲೆ ದಾಳಿ ಇಟ್ಟು ನಾಶ ಪಡಿಸುತ್ತಿವೆ. ರೈತರು ರಾತ್ರಿ ವೇಳೆ ಮನೆಗಳನ್ನು ಬಿಟ್ಟು ಜಮೀನುಗಳ ಬಳಿ ಬಂದು ಹಂದಿಗಳು ಬಾರದ ಹಾಗೆ ಕಾವಲು ಕಾಯುವ ಅನಿವಾರ್ಯ ಸೃಷ್ಟಿಯಾಗಿದೆ.

ಗ್ರಾಮಗಳ ಅಂಚಿನಲ್ಲೆ ಅರಣ್ಯ ಪ್ರದೇಶ :

ಬಾನಂದೂರು, ಕೆಂಪನಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತೆ ಹಂದಿಗುಂದಿ ಅರಣ್ಯ ಪ್ರದೇಶವಿದ್ದು, ಇಲ್ಲಿಂದ ಕಾಡು ಪ್ರಾಣಿಗಳು ರಾತ್ರಿ ವೇಳೆ ರೈತರ ಜಮೀನುಗಳಿಗೆ ದಾಳಿ ಮಾಡುತ್ತಿವೆ. ಕೆಲವು ವೇಳೆ ಹಗಲಿನಲ್ಲೆ ಕಾಣಿಸಿಕೊಂಡಿರುವ ಉದಾಹರಣೆಗಳೂ ಇವೆ. ಕಾಡು ಹಂದಿಗಳ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿರುವುದೇ ಸಮಸ್ಯೆ ಉಲ್ಬಣಕ್ಕೆ ಕಾರಣ ಎಂಬುದು ರೈತರ ಆರೋಪ.

ನವಿಲುಗಳ ಹಾವಳಿ

ನವಿಲುಗಳ ಕೂಗು ಬೆಳಗಿನ ಜಾವ ಐದು ಗಂಟೆಗೆ ಆರಂ‘ವಾದರೆ, ಸಂಜೆವರೆಗೂ ಒಂದಲ್ಲ ಒಂದು ತೋಟಗಳಲ್ಲಿ ಓಡಾಟ ಕಾಣಬಹುದಾಗಿದೆ. ರಾಗಿ, ಜೋಳ ಸೇರಿ ಹೊಲದಲ್ಲಿ ಬಿತ್ತಲಾಗಿರುವ ಇತರ ಕಾಳುಗಳನ್ನು ನವಿಲುಗಳ ಹಿಂಡು ತಿಂದು ಹಾಕುತ್ತಿದೆ. ಜೋಳದ ಬೀಜ ಮೊಳಕೆಯೊಡೆದು ಪೈರಾಗಿದ್ದರೂ ಪೈರಿನ ಬೇರಿನಲ್ಲಿರುವ ಬೀಜವನ್ನು ಕಿತ್ತು ತಿನ್ನುತ್ತಿವೆ.

ಭೈರವ, ವಲಯ ಅರಣ್ಯಾಧಿಕಾರಿ, ಬಿಡದಿ

ಬಾನಂದೂರು ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡು ಹಂದಿಗಳ ಉಪಟಳ ನಡೆಯುತ್ತಿದೆ. ಇವುಗಳನ್ನು ತಡೆಯಲು ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ನಂಜುಂಡಿ, ಬಾನಂದೂರು ಗ್ರಾಮದ ರೈತ

ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಒಂದೇ ರಾತ್ರಿಯಲ್ಲಿ ತಿಂದು ನಾಶ ಮಾಡುತ್ತಿವೆ. ಕಟಾವಿಗೆ ಬಂದಿದ್ದ ರಾಗಿ ಬೆಳೆಯನ್ನು ತಿಂದು ನಾಶಪಡಿಸಿವೆ. ನೂರಾರು ಹಂದಿಗಳು ಒಮ್ಮೆಗೆ ಜಮೀನುಗಳಿಗೆ ದಾಳಿ ಮಾಡುತ್ತಿವೆ. ರಾತ್ರಿ ವೇಳೆ ಹಂದಿಗಳ ಹಾವಳಿ, ಮುಂಜಾನೆ ಹಾಗೂ ಸಂಜೆ ನವಿಲುಗಳ ಹಾವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳು ರೈತರ ಬೆಳೆಗಳನ್ನು ನಾಶ ಮಾಡಬಹುದು. ಆದರೆ ರೈತರು ಬೆಳೆಗಳ ರಕ್ಷಣೆಗೆ ಹಂದಿಗಳನ್ನು ಹೊಡೆದರೆ ತಪ್ಪಾಗುತ್ತದೆ. ಹಾಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಕೊಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net