ಕಾಡುಹಂದಿ ಬೇಟೆ ಆಡಿ ಸೆರೆ ಸಿಕ್ಕ ಇಬ್ಬರು

171
Published on

ಚನ್ನಗಿರಿ: ತಾಲೂಕಿನ ಜೋಳದಾಳು ಅಮ್ಮನಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನದ ಬಳಿ ಕಾಡುಹಂದಿ ಬೇಟೆಯಾಡಿ ವಾಹನದಲ್ಲಿ ಸಾಗಿಸುತ್ತಿದ್ದ ನಾಲ್ವರ ಪೈಕಿ ಇಬ್ಬರನ್ನು ಚನ್ನಗಿರಿ ಅರಣ್ಯ ವಲಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ತಾಲೂಕಿನ ದೇವರಹಳ್ಳಿ ಗ್ರಾಮದ ಗಣೇಶ ಹಾಗೂ ರಾಕೇಶ ಬಂಧಿತರು. ಗಾಣದಕಟ್ಟೆಯ ವೆಂಕಟೇಶ ಹಾಗೂ ಆತನ ಸ್ನೇಹಿತ ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ಕಾಡುಹಂದಿಯ ಕಳೇಬರ ಹಾಗೂ ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದಾರೆ.

ಟಾಟಾ ಏಸ್ ವಾಹನದ ಮೂಲಕ ಅಮ್ಮನಗುಡ್ಡ ದೇವಸ್ಥಾನಕ್ಕೆ ತೆರಳಿದ್ದ ಗಣೇಶ ಹಾಗೂ ರಾಕೇಶ ಸ್ನೇಹಿತರ ಜತೆ ಸೇರಿ, ಕಾಡುಹಂದಿಗಳು ಆಹಾರ ಅರಸಿ ಬರುವ ಸ್ಥಳದಲ್ಲಿ ಮದ್ದು ಸೇರಿಸಿದ ಆಹಾರ ಇಟ್ಟು ಬೇಟೆಯಾಡಿದ್ದರು.

ಕಾಡು ಹಂದಿಯನ್ನು ವಾಹನದಲ್ಲಿ ಸಾಗಿಸುವಾಗ ಗಾಣದಕಟ್ಟೆ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಇಬ್ಬರು ಸಿಕ್ಕಿಬಿದ್ದರೆ ಇನ್ನೊಬ್ಬರು ತಪ್ಪಿಕೊಂಡು ಪರಾರಿಯಾಗಿದ್ದರು.

ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಹಂದಿಯ ಮೃತದೇಹವನ್ನು ಪಶು ವೈದ್ಯಾಧಿಕಾರಿ ಮೂಲಕ ಶವಪರೀಕ್ಷೆ ಮಾಡಿಸಿದ್ದಾರೆ.

ಅರಣ್ಯ ಇಲಾಖೆ ಎಸಿಎಫ್ ಟಿ.ಎ.ರತ್ನಪ್ರಭಾ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಮಧುಸೂದನ್, ಎಚ್.ಗಿರೀಶ್, ದೀಪಕ್‌ಪ್ರಭು, ಹನುಮಂತಪ್ಪ, ಹಾಲನಗೌಡ್ರು ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net