

ಸಿದ್ದಾಪುರ: ಕಾಫಿ ತೋಟದಲ್ಲಿದ್ದ ಕಾಡಾನೆಯೊಂದು ಏಕಾಏಕಿ ರಸ್ತೆಗೆ ಬಂದು ಬಸ್ ಸೇರಿದಂತೆ ಕೆಲ ವಾಹನಗಳ ಮೇಲೆ ದಾಳಿಗೆ ಯತ್ನಿಸಿದ ಪ್ರಕರಣ ಸೋಮವಾರ ಮಧ್ಯಾಹ್ನ ಸಿದ್ದಾಪುರ ಸಮೀಪದ ಘಟ್ಟದಳ ಬಳಿ ನಡೆದಿದೆ.
ಮಾರ್ಗೊಳ್ಳಿ ತೋಟದಲ್ಲಿ ಮರಿಯೊಂದಿಗೆ ಆರು ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದವು. ಮತ್ತೊಂದು ತೋಟಕ್ಕೆ ತೆರಳಲು ಮುಂದಾದ ಕಾಡಾನೆಗಳ ಪೈಕಿ ಮರಿಯಾನೆ ಸೇರಿದಂತೆ ಕೆಲವು ಬೇರ್ಪಟ್ಟಿವೆ. ಈ ವೇಳೆ ಗಾಬರಿಗೊಂಡ ಒಂದು ಆನೆ ರಸ್ತೆಗೆ ಬಂದು ವಾಹನಗಳ ಮೇಲೆ ದಾಳಿಗೆ ಯತ್ನಿಸಿತು. ಚಾಲಕರು ವಾಹನವನ್ನು ಹಿಮ್ಮುಖ ಚಲಿಸುವ ಮೂಲಕ ದಾಳಿಯಿಂದ ಪಾರಾದರು. ನಂತರ ಕಾಡಾನೆ ತೋಟಕ್ಕೆ ಅಳವಡಿಸಿದ ಸೋಲಾರ್ ಬೇಲಿ ಮುರಿದು ತೋಟದೊಳಗೆ ನುಸುಳಿತು.
ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯ ಅಧಿಕಾರಿ ಪಿ.ಟಿ.ಶಶಿ ಹಾಗೂ ಸಿಬ್ಬಂದಿ ಬೇರ್ಪಟ್ಟ ಆನೆಗಳನ್ನು ಒಂದುಗೂಡಿಸಲು ಹರಸಾಹಸಪಟ್ಟರು. ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿದ್ದರಿಂದ ಸಂಜೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುವುದಾಗಿ ಸಿಬ್ಬಂದಿ ತಿಳಿಸಿದರು.