ವನ್ಯಜೀವಿಗಳ ದಾಳಿ ಪ್ರಕರಣ ಹೆಚ್ಚಳ

09-GPT-4
Published on

ಗುಂಡ್ಲುಪೇಟೆ: ಸರ್ಕಾರ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ರೈತರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.


ಹೋಬಳಿಯ ರೈತರ ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮಂಗಳವಾರ ತಾಲೂಕಿನ ಬೇಗೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಕಂದಾಯ, ಸಾರಿಗೆ, ಬ್ಯಾಂಕ್ ಹಾಗೂ ಸಾರಿಗೆ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಅಧಿಕಾರಿಗಳು ಗೈರಾಗಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.


ಹೋಬಳಿಯಲ್ಲಿ ವನ್ಯಜೀವಿಗಳ ದಾಳಿ ಪ್ರಕರಣ ಹೆಚ್ಚಾಗಿದೆ. ಬೆಟ್ಟದ ಮಾದಹಳ್ಳಿ ಸುತ್ತಮುತ್ತಲಿನ ಸರ್ಕಾರಿ ಗೋಮಾಳವನ್ನು ಅರಣ್ಯ ಇಲಾಖೆಗೆ ನೀಡಿದ್ದರಿಂದ ಜಾನುವಾರುಗಳ ಮೇವಿಗೆ ತೊಂದರೆಯಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಹಾಗೂ ರೋಗಿಗಳು ಪ್ರತಿ ನಿತ್ಯ ತೊಂದರೆ ಎದುರಿಸುತ್ತಿದ್ದಾರೆ ಎಂದು ದೂರಿದರು.


ಅನಿಯಮಿತ ವಿದ್ಯುತ್ ಕಡಿತದಿಂದ ಬೆಳೆಗಳು ನಾಶವಾಗುತ್ತಿವೆ. ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಯಮಬಾಹಿರವಾಗಿ ಸಾಲ ಮರುಪಾವತಿಗೆ ನೋಟಿಸ್ ನೀಡಿದೆ. ಅಕ್ರಮ ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. 10 ಟನ್ ಸಾಮರ್ಥ್ಯದ ಟಿಪ್ಪರ್‌ಗಳಲ್ಲಿ 50 ಟನ್ ತೂಕದ ಕಲ್ಲು ಸಾಗಿಸುತ್ತಿದ್ದರೂ ಪೊಲೀಸ್, ಸಾರಿಗೆ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಸುಮ್ಮನಿದ್ದಾರೆ. ಆದರೆ, ಹೆಲ್ಮೆಟ್ ಧರಿಸದ ಸಣ್ಣ ಪುಟ್ಟ ತಪ್ಪುಗಳಿಗೆ ದಂಡ ವಿಧಿಸುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಮುಂದಾದರೂ ಅಧಿಕಾರಿಗಳು ಗೈರಾಗುವ ಮೂಲಕ ರೈತ ವಿರೋಧಿ ಮನೋಭಾವ ಪ್ರದರ್ಶಿಸಿದ್ದಾರೆ. ಆದ್ದರಿಂದ ತಾಲೂಕು ಆಡಳಿತ ಹೋಬಳಿಯ ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಿಸಬೇಕು. ಬ್ಯಾಂಕ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬ ಮನವಿ ಪತ್ರವನ್ನು ಕಂದಾಯ ಅಧಿಕಾರಿ ಮಹದೇವಪ್ಪ ಅವರಿಗೆ ನೀಡಿದರು.


ಸಾರಿಗೆ ಡಿಪೋ ವ್ಯವಸ್ಥಾಪಕಿ ಪುಷ್ಪಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರ್, ಮುಖಂಡರಾದ ಷಣ್ಮುಖಸ್ವಾಮಿ, ದಡದಹಳ್ಳಿ ಮಹೇಶ್, ಮಂಚಹಳ್ಳಿ ಮಣಿಕಂಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net