ನಾಡಿನತ್ತ ಕಾಡು ಪ್ರಾಣಿಗಳ ದಾಂಗುಡಿ

Karadi -
Published on

* ಜನ-ಜಾನುವಾರು ಮೇಳೆ ದಾಳಿ

* ಅರಣ್ಯದಲ್ಲಿ ಆಹಾರ, ನೀರಿನ ಅಭಾವ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಬೇಸಿಗೆ ಶುರುವಾಗುತ್ತಿರುವ ಹೊತ್ತಿನಲ್ಲೇ ಕರಡಿ, ಚಿರತೆ ಸೇರಿ ಇತರ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಮುಖ ಮಾಡುತ್ತಿದ್ದು, ಜನರಲ್ಲಿ ಭಯಮೂಡಿಸುವ ಜತೆಗೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ.

ಜಿಲ್ಲೆಯಲ್ಲಿ ಆನೆ ಉಪಟಳದ ಜತೆಗೆ ಚಿರತೆ, ಕರಡಿ ದಾಳಿಯೂ ಹೆಚ್ಚಾಗಿದೆ. ಚಿರತೆ, ಕರಡಿಗಳು ಗ್ರಾಮದೊಳಗೆ ದಾಂಗುಡಿ ಇಡುತ್ತಿದ್ದು, ಜನರಲ್ಲಿ ಭಯ ಹುಟ್ಟಿಸಿವೆ. ಆನೆಗಳು ಸಲು ನಾಶಮಾಡಿದರೆ ಚಿರತೆ, ಕರಡಿಗಳು ಜನ- ಜಾನುವಾರುಗಳ ಮೇಲೆ ಎರಗುತ್ತಿವೆ.

ಕಳೆದ ವಾರವಷ್ಟೇ ಕೈಲಾಂಚ ಗ್ರಾಮದಲ್ಲಿ ಹಾಲು ಕರೆಯುತ್ತಿದ್ದವನ ಮೇಲೆ ಕರಡಿ ದಾಳಿ ಮಾಡಿ, ಗಂಭೀರ ಗಾಯಗೊಳಿಸಿರುವುದೇ ಪ್ರಾಣಿ ಸಂಘರ್ಷಕ್ಕೆ ತಾಜಾ ಉದಾಹರಣೆ. ಗ್ರಾಮದ ಹೊರವಲಯದಲ್ಲಿ ದಾಳಿ ಮಾಡುತ್ತಿದ್ದ ಕರಡಿ, ಚಿರತೆಗಳು ಈಗ ಗ್ರಾಮದೊಳಗೆ ನುಗ್ಗುತ್ತಿದ್ದು, ರಾತ್ರಿವೇಳೆ ಮನೆಯಿಂದ ಹೊರ ಬರಲೂ ‘ಯಬೀಳುವಂತಾಗಿದೆ.

ರಾಮನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು

ರಾಮನಗರ ತಾಲೂಕಿನ ಸಂಗನಬಸವನದೊಡ್ಡಿ, ಕೇತೋಹಳ್ಳಿ, ಬಸವನಪುರ, ಅರಳೀಮರದದೊಡ್ಡಿ, ಕೆಂಜಿಗರಹಳ್ಳಿ ‘ಾಗಗಳಲ್ಲಿ ಕರಡಿ, ಚಿರತೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ವಾರದಿಂದ ಸಂಗನಬಸವನದೊಡ್ಡಿ ರೈಲ್ವೆ ರಸ್ತೆ ಪಕ್ಕದ ಮಂದೇ ಬಯಲು ಗ್ರಾಮದಲ್ಲಿ ಪ್ರತಿದಿನ ಒಂದು ಭಾಗದಲ್ಲಿ ಎರಡು, ಮತ್ತೊಂದು ಭಾಗದಲ್ಲಿ ಒಂದು ಕರಡಿ ಓಡಾಟ ನಡೆಸುತ್ತಿದೆ. ರಾತ್ರಿ ವಿದ್ಯುತ್ ಬೆಳಕಿದ್ದರೆ ಕಾಡು ಪ್ರಾಣಿಗಳು ಹತ್ತಿರ ಸುಳಿಯುವುದಿಲ್ಲ ಎನ್ನಲಾಗುತ್ತದೆಯಾದರೂ ಆದರೀಗ ಕರಡಿಗಳು ವಿದ್ಯುತ್ ದೀಪ ಉರಿಯುತ್ತಿದ್ದರೂ, ಜನ ಕೂಗಿಕೊಂಡರೂ ಗ್ರಾಮಗಳಗೆ ಲಗ್ಗೆ ಇಡುತ್ತಿವೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜೀವ ಭಯ ಹೆಚ್ಚಿಸಿದೆ.

ಹಲಸಿನ ಹಣ್ಣು ಪ್ರಿಯ ಜಾಂಬವಂತ

ಕರಡಿಗಳಿಗೆ ಹಲಸಿನ ಹಣ್ಣು ಪ್ರಿಯ ಆಹಾರ. ಜಿಲ್ಲೆಯಲ್ಲಿ ಹಲಸನ್ನು ಹೆಚ್ಚಾಗಿ ಬೆಳೆಯುವುದಿಲ್ಲವಾದರೂ ಗ್ರಾಮೀಣ ಪ್ರದೇಶದಲ್ಲಿ ಮನೆ ಮುಂಭಾಗ ಹಾಗೂ ಹಿತ್ತಲಿನಲ್ಲಿ ಬೆಳೆಯುವುದದು ಸಾಮಾನ್ಯ. ಬೇಸಿಗೆಯು ಹಲಸು ಹಣ್ಣಿನ ಸೀಸನ್ ಆಗಿರುವ ಕಾರಣ ಹಣ್ಣಿನ ವಾಸನೆಗೆ ಕರಡಿಗಳು ಗ್ರಾಮದೊಳಗೆ ಬರುತ್ತಿವೆ. ಸಂಗನಬಸವನದೊಡ್ಡಿ ಮಂದೇ ಬಯಲು ಪ್ರದೇಶದಲ್ಲಿ ಹಲಸಿನ ಮರಗಳಿರುವ ಕಾರಣ ಕರಡಿಗಳು ಬರುತ್ತಿವೆ ಎಂದು ಅರಣ್ಯ ಇಲಾಖೆ ಹೇಳುತ್ತದೆ.

ಹಣ್ಣಾಗುವ ಮುಂಚೆ ಕೊಯ್ಲು ಮಾಡಿ

ಹಲಸಿನ ಹಣ್ಣು ಕಂಡರೆ ಕರಡಿಗಳಿಗೆ ಪಂಚ ಪ್ರಾಣ. ಒಂದು ಹಲಸಿನ ಹಣ್ಣು ಸಿಕ್ಕರೆ ಅವುಗಳಿಗೆ ಅದೇ ವರ್ಷದ ಮೃಷ್ಠಾನ್ನ ಭೋಜನ. ಮರದಲ್ಲಿ ವಾಸನೆ ಬರುವ ಮುಂಚೆಯೇ ರೈತರು ಹಲಸಿನ ಹಣ್ಣು ಕಿತ್ತರೆ ಕರಡಿಗಳು ವಾಸನೆ ಹಿಡಿದು ಬರುವುದಿಲ್ಲ. ಗ್ರಾಮದೊಳಗೆ ಕರಡಿಗಳು ಕಂಡಾಗ ಪಟಾಕಿ ಅಥವಾ ಬೆಂಕಿ ಹತ್ತಿಸಿ ಅವುಗಳಿಗೆ ಭಯ ತರಿಸಿದರೆ ಬೆಂಕಿ ಮತ್ತು ಪಟಾಕಿ ಶಬ್ದಕ್ಕೆ ಹೆದರಿ ಮತ್ತೆ ಆ ಜಾಗಕ್ಕೆ ಬರಲು ಕರಡಿಗಳು ಹೆದರುತ್ತವೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆ

ಮನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ಅರಳೀಮರದೊಡ್ಡಿ ಗ್ರಾಮದಲ್ಲಿ ಶನಿವಾರ ದೇವರಾಜು ಅವರು ಆಕಿದ್ದ ಕುರಿ ತಿಂದಿರವ ಚಿರತೆ, ಸಂಜೆ 4ರ ಸುಮಾರಿಗೆ ಅಲುಮೇಲಮ್ಮ ಎಂಬುವರ ಮನೆ ಹಿತ್ತಲಿನಲ್ಲಿ ಮೇಯುತ್ತಿದ್ದ ನಾಲ್ಕು ವರ್ಷದ ಮಿಶ್ರತಳಿಯನ್ನು ಕೊಂದಿದೆ. ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ರಾತ್ರಿ ಸಮಯದಲ್ಲೇ ಮನೆ ಕಾಂಪೌಂಡ್ ಹಾರಿ ಒಳಗೆ ಬಂದಿರುವ ಎರಡು ದೊಡ್ಡ ಚಿರತೆಗಳು, ಮನೆ ಆವರಣದಲ್ಲಿ ಯಾವ ಭಯವಿಲ್ಲದೆ ಓಡಾಟ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು.

ಆಹಾರ, ನೀರಿನ ಕೊರತೆ

ಜಿಲ್ಲೆಯ ಅರಣ್ಯದಲ್ಲಿ ಹಲಸು ಸೇರಿ ಕರಡಿಗಳಿಗೆ ಬೇಕಾದ ಹಣ್ಣುಗಳು ಸಿಗುತ್ತಿಲ್ಲ. ಅರಣ್ಯ ಇಲಾಖೆ ಮರಗಿಡಗಳಿಗೆ ಒತ್ತು ಕೊಟ್ಟಿದೆ ವಿನಃ ಪ್ರಾಣಿಗಳಿಗೆ ಬೇಕಾದ ಆಹಾರ ಒದಗಿಸುವಲ್ಲಿ ವಿಲವಾಗಿದೆ. ಇದರಿಂದ ಕರಡಿಗಳು ನಾಡಿಗೆ ದಾಂಗುಡಿ ಇಡುತ್ತಿವೆ. ಇತ್ತ ಚಿರತೆಗಳಿಗೆ ಅರಣ್ಯದಲ್ಲಿ ಸಿಗುತ್ತಿದ್ದ ಕಾಡುಕೋಳಿ, ಮೊಲ, ಕಾಡುಕುರಿ, ಜಿಂಕೆ ಇನ್ನಿತರ ಪ್ರಾಣಿಗಳು ಬೇಟೆಗೆ ಸಿಗದ ಕಾರಣ ಗ್ರಾಮದೊಳಕ್ಕೆ ಬರುತ್ತಿವೆ. ಇದಕ್ಕಿಂತ ಮುಖ್ಯವಾಗಿ ಅರಣ್ಯದಲ್ಲಿ ನೀರಿನ ಕೊರತೆ ಉಂಟಾಗುವ ಕಾರಣ ಗ್ರಾಮದತ್ತ ಮುಖ ಮಾಡುತ್ತಿವೆ ಎನ್ನುತ್ತಾರೆ ಕಾಡನಕುಪ್ಪೆ ರಾಘವೇಂದ್ರ.

ಹೆದರುವ ಪರಿಸ್ಥಿತಿ

ಕೇತೋಹಳ್ಳಿ, ಕೆಂಜಿಗರಹಳ್ಳಿ ಗ್ರಾಮಗಳಿಂದ ಕಾರ್ಖಾನೆಗಳಿಗೆ ಹೆಚ್ಚಿನ ಜನ ಓಡಾಡುತ್ತಾರೆ. ಹೆಚ್ಚಿನ ಬಸ್ ಸೌಲಭ್ಯ ಇಲ್ಲ ಸಂಗನಬಸವನದೊಡ್ಡಿ ಮಾಯಗಾನಹಳ್ಳಿಯಿಂದ ಜನ ಸಂಪರ್ಕ ರಸ್ತೆಯಲ್ಲಿ ಸಾಗಬೇಕು. ಕರಡಿಗಳ ಓಡಾಟದಿಂದ ರಾತ್ರಿ ವೇಳೆ ಸಂಚಾರ ಮಾಡಲು ಜನ ಹೆದರುವಂತಾಗಿದೆ ಎನ್ನುತ್ತಾರೆ ರೇವಣ್ಣ.

ಮಾಯಗಾನಹಳ್ಳಿ ಸೊಪ್ಪಿನ ಗುಡ್ಡೆಯಲ್ಲಿ ನಾಲ್ಕು ಕರಡಿಗಳು ಕಂಡುಬಂದಿವೆ. ಇಷ್ಟು ದಿನದಲ್ಲಿ ಕರಡಿಗಳು ಕಂಡಿರಲಿಲ್ಲ. ಅರಣ್ಯ ಇಲಾಖೆಯೇ ಹೊರಗಡೆಯಿಂದ ಕರಡಿ ಬಿಟ್ಟಿದೆ ಎಂಬ ಶಂಕೆ ಜನರಲ್ಲಿದೆ. ಈ ‘ಭಾಗದಲ್ಲಿ ಕಾರ್ಖಾನೆಗಳು ಇರುವ ಕಾರಣ ಜನ ರಾತ್ರಿ ವೇಳೆಯೂ ಓಡಾಡುತ್ತಾರೆ. ಕರಡಿಗಳು ಗ್ರಾಮದೊಳಕ್ಕೆ ಬರುತ್ತಿರುವ ಕಾರಣ ಎಲ್ಲೆಡೆ ‘ಯ ಮನೆಮಾಡಿದೆ.  ಅರಣ್ಯ ಇಲಾಖೆ ಕರಡಿಗಳನ್ನು ಹಿಡಿದು ದೊಡ್ಡ ಅರಣ್ಯ ಪ್ರದೇಶಕ್ಕೆ ಬಿಡಬೇಕು. ಎಂ.ಆರ್.ಸಂತೋಷ್ ಮಾಯಗಾನಹಳ್ಳಿ

ಅರಣ್ಯ ಇಲಾಖೆ ಯಾವ ಕರಡಿಗಳನ್ನೂ ತಂದು ಬಿಟ್ಟಿಲ್ಲ. ಹಲಸಿನ ಹಣ್ಣು ಸೀಸನ್ ಆಗಿರುವ ಕಾರಣ ಆಹಾರ ಅರಸಿ ಕರಡಿಗಳು ಅರಣ್ಯದಿಂದ ಹೊರ ಬರುತ್ತಿವೆ ಅಷ್ಟೇ. ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಿದೆ. ಚಿರತೆಗಳನ್ನು ಬೋನು ಇಟ್ಟು ಸೆರೆ ಹಿಡಿಯಲಾಗುವುದು.

 ಮಹಮ್ಮದ್ ಮನ್ಸೂರ್, ವಲಯ ಅರಣ್ಯಾಧಿಕಾರಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net