

ಭಟ್ಕಳ: ತಾಲೂಕಿನ ಪ್ರಸಿದ್ಧ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವವನ್ನು ಮಾಡದಂತೆ ಅಧಿಕಾರಿಗಳು ಆದೇಶ ನೀಡಿದ್ದು, ದೇವಾಲಯದಲ್ಲಿ ಕರೊನಾ ಮಾರ್ಗಸೂಚಿ ಅನ್ವಯ ಕೇವಲ ಧಾರ್ವಿುಕ ವಿಧಿ ವಿಧಾನಗಳನ್ನು ಮಾತ್ರ ಅನುಸರಿಸುವಂತೆ ಸೂಚನೆ ನೀಡಿದ್ದಾರೆ.
ಏ. 21ರಂದು ಜರುಗಲಿರುವ ರಥೋತ್ಸವ ಆಚರಣೆಗೆ ತಡೆ ನೀಡುವ ನಿಟ್ಟಿನಲ್ಲಿ ಭಾನುವಾರ ಉಪವಿಭಾಗಾಧಿಕಾರಿ ಮಮತಾದೇವಿ, ಪೊಲೀಸ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.
ಸರ್ಕಾರದ ಹೊಸ ಕರೊನಾ ತಡೆ ಮಾರ್ಗಸೂಚಿ ಅನ್ವಯ ಜಾತ್ರೆ, ರಥೋತ್ಸವ ಆಚರಣೆಗೆ ಅವಕಾಶ ಇಲ್ಲ. ನಿಯಮ ಮೀರಿ ವರ್ತಿಸಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಜಾತ್ರೆ ನಿಲ್ಲಿಸುವುದು ಸಾಧ್ಯವಿಲ್ಲ
ಪತ್ರಿಕೆಯೊಂದಿಗೆ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಮೊಗೇರ, ನಾವು ಈಗಾಗಲೇ ರಥೋತ್ಸವದ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಈಗ ಜಾತ್ರೆ, ಉತ್ಸವ ನಡೆಸದಂತೆ ಹಾಗೂ ದೇವಾಲಯದಲ್ಲಿ ಕರೊನಾ ಮಾರ್ಗಸೂಚಿ ಅನ್ವಯ ಧಾರ್ವಿುಕ ವಿಧಿವಿಧಾನ ನಡೆಸದಂತೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನಮ್ಮ ಧಾರ್ವಿುಕ ಆಚರಣೆಯಲ್ಲಿ ರಥೋತ್ಸವದ ಗರುಡ ಏರಿಸಿದ ಬಳಿಕ ರಥೋತ್ಸವ ನಿಲ್ಲಿಸುವಂತೆ ಇಲ್ಲ. ರಥೋತ್ಸವಕ್ಕೆ ನಿಷೇಧ ಹೇರಿರುವುದರಿಂದಾಗಿ ಈ ಬಾರಿ ಹನುಮ ರಥ ಏರಿ ಸಂಚಾರ ಮಾಡುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಆದರೆ, ಈಗಾಗಲೇ ಸಿದ್ಧತೆ ಅಂತಿಮ ಘಟ್ಟಕ್ಕೆ ಬಂದಿರುವುದರಿಂದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹನುಮಂತನ ವಿಗ್ರಹವನ್ನು ಸಿಂಗಾರಗೊಂಡ ರಥದಲ್ಲಿ ಕುಳ್ಳಿರಿಸಿ, ಪೂಜೆ ಸಲ್ಲಿಸಿದ ನಂತರ ರಥದಿಂದ ಕೆಳಕ್ಕೆ ಕರೆದುಕೊಂಡು ಬಂದು ರಥೋತ್ಸವವನ್ನು ಮುಕ್ತಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.