ಪತಿಯಿಂದಲೇ ಪತ್ನಿಯ ಕೊಲೆ

Published on

ಮಾಗಡಿ : ಪಟ್ಟಣದ ಹೂಜಗಲ್ಲು ಬೆಟ್ಟದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ರಾಯಚೂರಿನ ದಿವ್ಯಾ (30) ಮೃತೆ.
ತಾಲೂಕಿನ ಕುರುಪಾಳ್ಯದ ನಿವಾಸಿ, ಪತಿ ಉಮೇಶ್ ಆರೋಪಿ.
ಉಮೇಶ್, ದಿವ್ಯಾ 5 ವರ್ಷದ ಹಿಂದೆ ವಿವಾಹವಾಗಿದ್ದು, ಇವರಿಗೆ ಒಬ್ಬ ಪುತ್ರ ಇದ್ದಾನೆ. ಆದರೆ, ದಿವ್ಯಾ 2 ವರ್ಷದಿಂದ ಪತಿಯಿಂದ ದೂರವಾಗಿ, ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ವಿವಾಹ ವಿಚ್ಛದನಕ್ಕೆ ಇಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಇತ್ತೀಚೆಗೆ ವರಸೆ ಬದಲಿಸಿದ್ದ ಉಮೇಶ್, ವಿಚ್ಛೇದನ ಬೇಡ ಕೇಸ್ ವಾಪಸ್ ತೆಗೆದುಕೊಂಡು ಹೊಂದಾಣಿಕೆಯಿಂದ ಜೀವನ ನಡೆಸೋಣ ಎಂದು ದಿವ್ಯಾಳ ಮನವೊಲಿಸಿ ಮಾದನಾಯಕನಹಳ್ಳಿಯಿಂದ ಆ.12ರಂದು ಕರೆದುಕೊಂಡು ಬಂದಿದ್ದ. ಈ ವೇಳೆ ಹೂಜಗಲ್ಲು ಬೆಟ್ಟದ ಬಸವಣ್ಣ ದೇವರಿಗೆ ಪೂಜೆ ಮಾಡಿಸುವ ನೆಪದಲ್ಲಿ ದಿವ್ಯಾಳನ್ನು ಅಲ್ಲಿಗೆ ಕರದೊಯ್ದು ನಾಲ್ವರು ಸ್ನೇಹಿತರೊಂದಿಗೆ ಸೇರಿ ಟವಲ್‌ನಿಂದ ಕುತ್ತಿಗೆಗೆ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿ, ನಂತರ ಶವವನ್ನು ಬೈಕ್‌ನಲ್ಲಿ ಕಟ್ಟಿಕೊಂಡು 4 ಕಿಮಿ ದೂರದ ಚೀಲೂರು ಬೆಟ್ಟದ ತಪ್ಪಲಿಗೆ ಕೊಂಡೊಯ್ದು ಗುಂಡಿ ತೆಗೆದು ಹೂತು ಹಾಕಿ ಪರಾರಿಯಾಗಿದ್ದರು.
ದಿವ್ಯಾ ಮನೆಗೆ ಬಾರದಿದ್ದರಿಂದ ಅನುಮಾನಗೊಂಡು ಸಹೋದರಿ, ಮಾಗಡಿ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಇನ್‌ಸ್ಪೆಕ್ಟರ್ ಜಿ.ವೈ.ಗಿರಿರಾಜು ಹಾಗೂ ಸಿಬ್ಬಂದಿ, ಉಮೇಶ್ ಸಹಚರರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಹೂತು ಹಾಕಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಬೆಂಗಳೂರು ನಗರದ ಆರ್.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ.
ಆರೋಪಿಗಳಾದ ನಾಗಶೆಟ್ಟಹಳ್ಳಿಯ ರೋಹಿತ್, ಶಶಾಂಕ್, ಭರತ್‌ರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪತಿ ಉಮೇಶ್ ಹಾಗೂ ಆತನ ಸ್ನೇಹಿತ ಕಿರಣ್ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ. ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net