ಕೃಷಿ ಭೂಮಿಯಲ್ಲೇ ಟೌನ್​ಶಿಪ್​ ನಿರ್ಮಾಣ ಏಕೆ?

16 Bidadi PROa TEST
Published on

ಸರ್ಕಾರಕ್ಕೆ ವಿಪಕ್ಷ ನಾಯಕ ಆರ್​.ಅಶೋಕ್​ ಪ್ರಶ್ನೆ | ಬೈರಮಂಗಲ&ಕಂಚುಗಾರನಹಳ್ಳಿ ಭೂಸ್ವಾಧಿನ ವಿರೋಧಿ ಹೋರಾಟಕ್ಕೆ ಬಿಜೆಪಿ ನಾಯಕರ 'ಬಲ'

 ಬಿಡದಿ: ಹೌಸಿಂಗ್​ ಬೋರ್ಡ್​ನವರು ಬೆಂಗಳೂರಿನಲ್ಲಿ ನೂರಾರು ಎಕರೆಯನ್ನು ಸ್ವಾಧಿನಕ್ಕೆ ಪಡೆದು, ಮನೆಗಳನ್ನು ಕಟ್ಟಿದ್ದಾರೆ. ಅವೇ ಖಾಲಿ ಬಿದ್ದಿವೆ. ಹೀಗಿದ್ದರೂ ಬಿಡದಿಯಲ್ಲಿ ಸ್ಮಾರ್ಟ್​ ಸಿಟಿ ನಿರ್ಮಿಸಿ ಏನು ಸಾಧನೆ ಮಾಡುತ್ತಾರೆ? ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಆರ್​.ಅಶೋಕ್​ ಕಿಡಿಕಾರಿದರು.

ಬಿಡದಿ ಭೂಸ್ವಾಧಿನ ವಿರೋಧಿಸಿ ಬೈರಮಂಗಲದ ಶ್ರೀರಾಮ ದೇಗುಲ ಬಳಿ ಬೈರಮಂಗಲ&ಕಂಚುಗಾರನಹಳ್ಳಿ ರೈತರ ಭೂಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ, ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಬಿಡಿಎಯಿಂದ ನಿರ್ಮಿಸಿರುವ 8 ಲ ಪ್ಲಾಟ್​ಗಳೇ ಖಾಲಿ ಬಿದ್ದಿವೆ. ಆ ಪ್ಲಾಟ್​ಗಳಿಗೆ ನೀರು, ವಿದ್ಯುತ್​ ಸೇರಿ ಬೇಕಿರುವ ಸೌಕರ್ಯಗಳನ್ನು ಮೊದಲು ಕಲ್ಪಿಸಲಿ. ಆನಂತರ ಇಲ್ಲಿ ಸಿಟಿ ನಿರ್ಮಿಸಲಿ ಎಂದರು.

ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಯಾವುದೇ ಭೂಸ್ವಾಧಿನಕ್ಕೆ ಕೈ ಹಾಕಿರಲಿಲ್ಲ. ಆದರೀಗ ರಾಜ್ಯದ ಮುಗ್ಧ ಜನರಿಗೆ ಕೂಪನ್​ ಕೊಟ್ಟು ಸದ್ಯ ಕತ್ತಲೆ ಕೂಪಕ್ಕೆ ತಳ್ಳಿರುವ ಈ ಕಾಂಗ್ರೆಸ್​ ಸರ್ಕಾರ ಇನ್ನು ಎರಡು ವರ್ಷ ಮಾತ್ರ ಇರುತ್ತದೆ. ಅಲ್ಲಿಯವರೆಗೆ ರೈತರ ಈ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರಲಿದೆ ಎಂದು ಆರ್​.ಅಶೋಕ್​ ಅಭಯ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್​.ಆನಂದಸ್ವಾಮಿ, ಬಿಜೆಪಿ ಮುಖಂಡರಾದ ಕೆ.ಆರ್​.ಪ್ರಸಾದ್​ ಗೌಡ, ಗೌತಮ್​ ಗೌಡ ಹೋರಾಟ ಸಮಿತಿಯ ರಾಮಯ್ಯ, ಮಂಡಲಹಳ್ಳಿ ನಾಗರಾಜು, ಪ್ರಕಾಶ್​, ಶೀನಪ್ಪ ರೆಡ್ಡಿ, ರಾಧಾಕೃಷ್ಣ, ಕೃಷ್ಣ, ಅಶ್ವತ್ಥ, ರೇವಣ್ಣ, ಶಿವರಾಮು ಹಾಗೂ ರೈತರು ಉಪಸ್ಥಿತರಿದ್ದರು.

ಯಾವುದೇ ಕಾರಣಕ್ಕೂ ಭೂಮಿ ಕೊಡಬೇಡಿ

ಬೆಂಗಳೂರಿಗೆ ಹತ್ತಿರ ಇರುವ ಬಿಡದಿ ಭಾಗದ ಲವತ್ತಾದ ಕೃಷಿ ಜಮೀನುಗಳ ಮೇಲೆ ಏಕೆ ನಿಮ್ಮ ಕಣ್ಣು? ಫಲವತ್ತಾದ ಭೂಮಿಯಲ್ಲೇ ಏಕೆ ಟೌನ್​ಶಿಪ್​? ಬಂಜರು ಭೂಮಿಯಲ್ಲಿ ಸ್ಮಾರ್ಟ್​ ಸಿಟಿ ನಿರ್ಮಿಸಿದರೆ ಯಾರೂ ಅಡ್ಡಿ ಪಡಿಸಲ್ಲ ಎಂದ ಆರ್​.ಅಶೋಕ್​, ರೈತರು ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡಬಾರದು. ಒಂದು ವೇಳೆ ಬಿಟ್ಟರೆ ನಿಮ್ಮದೆ ಭೂಮಿಯಲ್ಲಿ ಮುಂದೆ ನೀವೇ ವಾಚ್​ಮನ್​ ಆಗಬೇಕಾದಿತು ಎಂದು ಎಚ್ಚರಿಕೆ ನೀಡಿದರು.

ನಾವು ರೈತರ ಮಕ್ಕಳು ಎನ್ನುವ ಕಾಂಗ್ರೆಸ್ಸಿಗರು, ಅದೇ ರೈತರಿಗೆ ಭೂಸ್ವಾಧಿನದ ಹೆಸರಿನಲ್ಲಿ ಅನ್ಯಾಯ, ಮೋಸ ಮಾಡುತ್ತಿದ್ದಾರೆ. ದೇವನಹಳ್ಳಿ ರೈತರು ಭೂಮಿ ಉಳಿವಿಗಾಗಿ ನಡೆಸಿದ ಹೋರಾಟದ ಹಾದಿಯಲ್ಲಿ ನಮ್ಮ ಹೋರಾಟ ಸಾಗಬೇಕಿದೆ. ರೈತರ ಒಗ್ಗಟ್ಟಿನ ಶಕ್ತಿ ಮುಂದೆ ಯಾವುದೇ ರಾಜಕೀಯ ಆಟಗಳು ನಡೆಯಲ್ಲ | ಡಾ.ಸಿ.ಎನ್​.ಮಂಜುನಾಥ್​ ಸಂಸದ ಬೆಂ. ಗ್ರಾಮಾಂತರ

ಜಮೀನು ಕಬಳಿಸುವ ಹುನ್ನಾರ: ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್​.ಅಶ್ವತ್ಥ ನಾರಾಯಣ್​ ಮಾತನಾಡಿ, ತಾತಮುತ್ತಾತರ ಕಾಲದಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಭೂಮಿ ಉಳಿವಿಗಾಗಿ ರೈತರು ಹೋರಾಡುತ್ತಿದ್ದಾರೆ. ಈಗಾಗಲೇ ಭೂಸ್ವಾಧಿನ ವಿರೋಧಿಸಿ ಹಲವು ಹೋರಾಟಗಳು ನಡೆದಿವೆ. ಆದರೂ ಹೋರಾಟಗಾರರ ಕೂಗು ಕೇಳಿಸಿಕೊಳ್ಳುವ ಕಿವಿ, ನೋಡುವ ಕಣ್ಣುಗಳು ಕಾಂಗ್ರೆಸ್​ ಸರ್ಕಾರಕ್ಕೆ ಇಲ್ಲ. ಇದೊಂದು ರೈತ ವಿರೋಧಿ ಸರ್ಕಾರ. ಸ್ಮಾರ್ಟ್​ ಸಿಟಿ ಹೆಸರಿನಲ್ಲಿ ರೈತರಿಂದ ಜಮೀನು ಪಡೆದು ರಿಯಲ್​ ಎಸ್ಟೇಟ್​ನವರಿಗೆ ಮಾರಾಟ ಮಾಡುವ ಯೋಜನೆ ಇದಾಗಿದೆ ಎಂದು ಅಶ್ವತ್ಥನಾರಾಯಣ ಪ್ರತಿಭಟನಾ ನಿರತ ರೈತರಿಗೆ ತಿಳಿಸಿದರು.

ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 9,600 ಎಕರೆ ಕೃಷಿ ಭೂಮಿ ಕಬಳಿಸಲು ಹಲವು ಕಾಯ್ದೆ ತಿರುಚಿದ್ದಾರೆ. 2013ರ ಭೂಸ್ವಾಧಿನ ಕಾಯ್ದೆಯಂತೆ ಸರ್ಕಾರಕ್ಕೆ ಭೂಸ್ವಾಧಿನಕ್ಕೆ ಮುಂದಾಗಿಲ್ಲ. ಈ ಕಾಯ್ದೆ ಬಿಟ್ಟು ಬೇರೆಬೇರೆ ಕಾಯ್ದೆ, ಕಾನೂನುಗಳನ್ನು ಜಾರಿಗೊಳಿಸಿ, ರೈತರ ಕೃಷಿ ಭೂಮಿಯನ್ನು ಕಿತ್ತು ಕೊಳ್ಳಲು ಸರ್ಕಾರ ಮುಂದಾಗಿದೆ. | ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಮಾಜಿ ಉಪಮುಖ್ಯಮಂತ್ರಿ

ಎಚ್​ಡಿಕೆ ಮೇಲೆ ಗೂಬೆ ಕೂರಿಸುವುದು ಬೇಡ: ಸಂಸದ ಡಾ.ಸಿ.ಎನ್​.ಮಂಜುನಾಥ್​ ಮಾತನಾಡಿ, ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ, ಕೆಂಪೇಗೌಡ ಬಡಾವಣೆ ಸೇರಿ ಹಲವು ಬಡಾವಣೆಗಳಲ್ಲೇ ಲಾಂತರ ನಿವೇಶನಗಳು ಮಾರಾಟವಾಗದೆ ಖಾಲಿ ಬಿದ್ದಿವೆ. ಈ ಭೂಸ್ವಾಧಿನ ವಿಚಾರದಲ್ಲಿ ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಕುಮಾರಸ್ವಾಮಿ ಅವರು ಟೌನ್​ಶ್​ಿ ಮಾಡಲು ಮುಂದಾಗಿದ್ದರಾದರೂ ರೈತರಿಂದ ಮನವಿಗಳು ಬಂದ ಬಳಿಕ ಮುಂದಾಗಲಿಲ್ಲ ಎಂದು ಸ್ಪಷ್ಟ ಪಡಿಸಿದರು.

ಜಿಲ್ಲೆಯ ಹೆಸರು, ಪ್ರಾಧಿಕಾರದ ಹೆಸರು ಬದಲಾವಣೆ ಮಾಡಿದ್ದು ಯಾವುದೇ ಅಭಿವೃದ್ಧಿ ದೃಷ್ಟಿಯಿಂದಲ್ಲ, ಅವರವರ ಅಭಿವೃದ್ಧಿಗೆ ಮಾತ್ರ. ಗ್ರೇಟರ್​ ಬೆಂಗಳೂರು ಮಾಡಿದ ಮೇಲೆ ಏನೂ ಬದಲಾವಣೆ ಕಂಡಿಲ್ಲ. ಅವರು ಹಣ ಮಾಡಲಿಕ್ಕಷ್ಟೇ ಮರು ನಾಮಕರಣ ಮಾಡಿಕೊಂಡಿದ್ದಾರೆ. |ಆರ್​.ಅಶೋಕ್​ ವಿಧಾನಸಭೆ ವಿಪಕ್ಷ ನಾಯಕ

ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನ ಭೂಸ್ವಾಧಿನ ವಿರೋಧಿ ಹೋರಾಟ ಬೆಂಬಲಿಸಿ ಧರಣಿ ಸ್ಥಳಕ್ಕೆ ವಿಪಕ್ಷ ನಾಯಕ ಆರ್​.ಅಶೋಕ್​ ಹಾಗೂ ಬಿಜೆಪಿ ನಾಯಕರು ಆಗಮಿಸಿದಾಗ, ನಮ್ಮ ಭೂಮಿಯನ್ನು ಕಿತ್ತು ಕೊಂಡರೆ ನಮಗೆ ಸಾಯುವ ದಾರಿ ಬಿಟ್ಟು ಬೇರೆ ದಾರಿ ಇಲ್ಲ ಎಂದು ಪ್ರತಿಭಟನಾ ನಿರತ ರೈತರಾದ ಚಿಕ್ಕಬೈರಮಂಗಲದ ನಾಗೇಶ್​ ಕುಮಾರ್​, ರಮ್ಯಾ, ಶಾರದಮ್ಮ ಎಂಬುವವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಈ ವೇಳೆ ಇತರ ಮಹಿಳೆಯರು ವಿಷದ ಬಾಟಲಿ ಕಿತ್ತುಕೊಂಡರಾದರೂ ಅಷ್ಟರಲ್ಲೇ ನಾಗೇಶ್​ ಕುಮಾರ್​ ವಿಷ ಸೇವಿಸಿಯೇಬಿಟ್ಟರು. ಕೂಡಲೇ ಅವರನ್ನು ಬೈರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಕ್ಕೆ ಬೇಸರ ವ್ಯಕ್ತ ಪಡಿಸಿದ ವಿಪಕ್ಷ ನಾಯಕ ಅಶೋಕ್​ ಹಾಗೂ ಅಶ್ವತ್ಥ ನಾರಾಯಣ, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಯಂತಹ ದುಡುಕು ನಿರ್ಧಾರ ತಗೆದುಕೊಳ್ಳಬಾರದು. ಸರ್ಕಾರದ ವಿರುದ್ಧ ಹೋರಾಟ ಮಾಡಿ ನ್ಯಾಯ ಪಡೆಯೋಣ ಎಂದು ಆತ್ಮ ಸ್ಥೆರ್ಯ ತುಂಬಿದರು.

ಶೀಟ್​ ಹಾಕಿ ಕೊಳ್ಳಲು ಅನುಮತಿ ಕೊಡಿ

ಬೈರಮಂಗಲದ ಶ್ರೀರಾಮ ಮಂದಿರದ ಮುಂದೆ ಹಮ್ಮಿಕೊಂಡಿದ್ದ ಧರಣಿ ಸ್ಥಳದಲ್ಲಿ ಮಳೆ, ಬಿಸಿಲು ಗಾಳಿಯಿಂದ ರಣೆ ಮಾಡಿಕೊಳ್ಳಲು ಶೀಟ್​ ಹಾಕುವುದಕ್ಕೆ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ರೈತರು ಆರ್​.ಅಶೋಕ್​ ಗಮನಕ್ಕೆ ತಂದರು. ಈ ವೇಳೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸ್​ ಗೌಡ ಅವರಿಗೆ ಪೋನ್​ ಕರೆ ಮಾಡಿದ ಆರ್​.ಅಶೋಕ್​, ಶೀಟ್​ ಹಾಕಿಕೊಳ್ಳಲು ಏಕೆ ಅನುಮತಿ ನೀಡುತ್ತಿಲ್ಲ ? ನೀವು ಕೂಡಲೇ ಸ್ಥಳಕ್ಕೆ ಬರಬೇಕೆಂದು ಸೂಚಿಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಎಸ್​ಪಿಯನ್ನು ತರಾಟೆ ತೆಗೆದುಕೊಂಡ ವಿಪಕ್ಷ ನಾಯಕರು, ಇದು ರೈತರ ಶಾಂತಿಯುತ ಹೋರಾಟ. ಹಾಗಾಗಿ ಅವರಿಗೆ ಶೀಟ್​ ಹಾಕಿಕೊಳ್ಳಲು ಅನುಮತಿ ನೀಡಿ ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net