ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸುವರ್ಯಾರು…?

RANEBENNUR SPRAK CANDLE
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಇಲ್ಲಿಯ ಮಾರುತಿ ನಗರದ ಬಾಡಿಗೆ ಕಟ್ಟಡದಲ್ಲಿನ ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರಕ್ಕೆ ಬೆಂಕಿ ಬಿದ್ದ ಅವಘಡದಿಂದ ಒಬ್ಬ ಮೃತಪಟ್ಟಿದ್ದು, ಆರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕೂಲಿ ಕಾರ್ವಿುಕರಾಗಿರುವ ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸುವರ್ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.


ಫ್ಯಾಕ್ಟರಿಗೆ ಕಡು ಬಡತನದ ಕಾರ್ವಿುಕರೇ ಕೆಲಸಕ್ಕೆ ಬರುತ್ತಿದ್ದರು. ತಿಂಗಳಿಗೆ ಮಾಲೀಕ ಕೊಡುತ್ತಿದ್ದ 8 ರಿಂದ 10 ಸಾವಿರ ರೂ. ಸಂಬಳ ಸಲುವಾಗಿ ಅಂಗೈಯಲ್ಲಿ ಬೆಂಕಿ ಹಿಡಿದು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದರು. ಅವರೀಗ ಘಟನೆಯಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.


ಮಾಲೀಕ ಶ್ರೀಕಾಂತ ತಿಮ್ಮಾಪುರ ಹಾಗೂ ಇಬ್ಬರು ಬೆಂಗಳೂರಿನಲ್ಲಿ, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಬಿಲ್ ಲಕ್ಷಾಂತರ ರೂಪಾಯಿ ಆಗುತ್ತಿದೆ. ಹೀಗಾಗಿ, ಕಾರ್ವಿುಕರ ಆಸ್ಪತ್ರೆಯ ಬಿಲ್ ಕಟ್ಟುವರ್ಯಾರು ಎಂಬ ಚಿಂತೆ ಕುಟುಂಬಸ್ಥರನ್ನು ಕಾಡುತ್ತಿದೆ.


ಮಾಲೀಕನ ಮೇಲೆ ಕಣ್ಣು: ಆಸ್ಪತ್ರೆಯಲ್ಲಿ ಮಾಲೀಕ ಶ್ರೀಕಾಂತ ಕೂಡ ಚಿಕಿತ್ಸೆ ಪಡೆಯುತ್ತಿರುವ ಕಾರಣ ಪೊಲೀಸರು ತನಿಖೆ ನಡೆಸುವ ಉದ್ದೇಶದಿಂದ ಆತನ ಮೇಲೂ ಕಣ್ಣಿಟ್ಟಿದ್ದಾರೆ. ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದರೆ, ಪೊಲೀಸರು ಗುಣವಾಗಿ ಆತ ತಲೆಮರೆಸಿಕೊಳ್ಳಬಾರದು ಎಂಬ ಉದ್ದೇಶದಿಂದ ಆತನ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಆಸ್ಪತ್ರೆಗೆ ಭೇಟಿ ನೀಡಿದ ಶ್ರೀಕಾಂತ ತಿಮ್ಮಾಪುರನ ಕುಟುಂಬದವರು ಕಾರ್ವಿುಕರ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಪರಿಹಾರವೂ ಅನುಮಾನ…?: ಘಟನೆಯಲ್ಲಿ ಮೃತಪಟ್ಟ ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದ ಶಂಭುಲಿಂಗಯ್ಯ ದ್ಯಾಮಣ್ಣನವರ ಕುಟುಂಬದವರು 10 ಲಕ್ಷ ರೂ. ಪರಿಹಾರ ಘೊಷಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಗಾಯಗೊಂಡವರ ಕುಟುಂಬದವರು ಆಸ್ಪತ್ರೆ ಖರ್ಚು ಸೇರಿ ಪರಿಹಾರ ನೀಡಬೇಕು ಎಂದು ಕೇಳಿದ್ದಾರೆ. ಆದರೆ, ಸರ್ಕಾರದಿಂದ ಇವರಿಗೆ ಪರಿಹಾರ ಘೊಷಣೆ ಅನುಮಾನ ಎನ್ನಲಾಗಿದೆ. ಕಾರಣ ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರ ಸರ್ಕಾರದ ಕಚೇರಿಯಿಂದ ಪರವಾನಗಿ ಹೊಂದಿಲ್ಲ. ಜತೆಗೆ ಕಾರ್ವಿುಕ ಇಲಾಖೆಯಲ್ಲೂ ನೋಂದಣಿಯಾಗಿಲ್ಲ. ಅಲ್ಲದೆ, ಪರಿಹಾರ ನೀಡುವ ಕುರಿತು ಯಾವ ಅಧಿಕಾರಿಗಳು ಅಧಿಕೃತವಾಗಿ ಹೇಳಿಲ್ಲ. ಹೀಗಾಗಿ, ನೊಂದವರಿಗೆ ಪರಿಹಾರ ಕೂಡ ಅನುಮಾನವಾಗಿದೆ.

ಕ್ರಮ ಕೈಗೊಳ್ಳಬೇಕಿದೆ ಶಾಸಕರುಘಟನೆ ನಡೆದು ನಾಲ್ಕು ದಿನ ಕಳೆಯುತ್ತ ಬಂದರೂ ಶಾಸಕ ಪ್ರಕಾಶ ಕೋಳಿವಾಡ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತ ಕಾರ್ವಿುಕ ಹಾಗೂ ಗಾಯಗೊಂಡವರಿಗೆ ನ್ಯಾಯ ಒದಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಅಮಾನತು ಮಾಡದಿದ್ದರೆ ಧರಣಿಪ್ರಕರಣದ ಕುರಿತು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರ ಅನಧಿಕೃತವಾಗಿ ನಡೆಯುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳದ ನಗರಸಭೆ ಪರಿಸರ ವಿಭಾಗದ ಇಂಜಿನಿಯರ್​ಗಳನ್ನು ಅಮಾನತು ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು. ಜಿಲ್ಲಾಧಿಕಾರಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆ. 13ರಂದು ಹಾವೇರಿ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net