

ಕೈಲಾಂಚ: ಹೋಬಳಿಯ ಹುಣಸನಹಳ್ಳಿ ಪಂಚಾಯಿತಿ ವ್ಯಾಪ್ತಿಯ ದಾಸೇಗೌಡನದೊಡ್ಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ನನೆಗುದಿಗೆ ಬಿದ್ದಿದ್ದು, ಜನ ಕೊಳಚೆ ನೀರು ದಾಟಿಯೇ ಸಂಚರಿಸುವಂತಾಗಿದೆ.
ಕಳೆದ ಒಂದು ವರ್ಷದ ಹಿಂದೆ ರಸ್ತೆ, ಚರಂಡಿ ಅಭಿವೃದ್ಧಿಗಾಗಿ ಬೀದಿಯನ್ನು ಅಗೆದು, ಕಲ್ಲಿನ ಚಪ್ಪಡಿಯಲ್ಲಿದ್ದ ಚರಂಡಿಯನ್ನು ತೆರವು ಮಾಡಲಾಯಿತು. ಆದರೆ ಚರಂಡಿ ಮಾಡಿದ ಬಳಿಕ ರಸ್ತೆಯ ದುರಸ್ತಿಗೆ ಯಾರೂ ಮುಂದಾಗಲಿಲ್ಲ. ಪರಿಣಾಮ ಮಳೆ ನೀರು, ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಕೆಲವೊಮ್ಮೆ ಜೋರು ಮಳೆಯಾದರೆ ಮನೆಗಳಿಗೂ ನೀರು ನುಗ್ಗುತ್ತದೆ. ಆದರೂ ಸಂಬಂಧಿತ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿಲ್ಲ.
ಮಣ್ಣಿನ ಮಾರ್ಗಗ್ರಾಮದ ಬಹುತೇಕ ಬೀದಿಗಳು ಮಣ್ಣಿನವು. ನೀರು ರಸ್ತೆಯಲ್ಲಿ ಹರಿದು ಬರುವ ಕಾರಣ ಮಾರ್ಗವೆಲ್ಲ ಕೆಸರು ಗದ್ದೆಯಾಗುತ್ತದೆ. ವೃದ್ಧರು, ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಜಾರಿ ಬಿದ್ದು, ಗಾಯಗೊಂಡ ಉದಾಹರಣೆಗೂ ಇವೆ. ಈ ಬಗ್ಗೆ ವರ್ಷದಿಂದಲೂ ಶಾಸಕರ ಗಮನಕ್ಕೆ, ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಬೀದಿಗೆ ಕಾಂಕ್ರೀಟ್ ಇಲ್ಲವೆ ಡಾಂಬರು ಹಾಕದಿದ್ದರೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವೆವು ಎಂದು ಎಚ್ಚರಿಸಿದರು.
ಚರಂಡಿ, ರಸ್ತೆ ಅಭಿವೃದ್ಧಿ ಮಾಡಲು ಕಳೆದೊಂದು ವರ್ಷದ ಹಿಂದೆ ಬೀದಿಯನ್ನು ಅಗೆಯಲಾಗಿದೆ. ಈಗ ಚರಂಡಿ ಆಗಿದ್ದು, ಮಣ್ಣಿನ ಬೀದಿ ಹಾಗೇ ಉಳಿದಿದೆ. ಮಳೆ ಬಂದಾಗ ಮೇಲಿನ ಕಾಲನಿ ನೀರು ಹರಿದು ಬಂದು ಮನೆಗಳಿಗೆ ನುಗ್ಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದ್ದು, ಈಗಾಗಲೇ ಶಾಸಕರ ಗಮನಕ್ಕೂ, ಗ್ರಾಪಂ ಗಮನಕ್ಕೂ ತರಲಾಗಿದೆ. > ಬೈರೇಗೌಡ ಗ್ರಾಪಂ ಸದಸ್ಯ, ದಾಸೇಗೌಡನದೊಡ್ಡಿ