ಯಾವಾಗ್ ಕೊಡ್ತಾರೆ ಪರಿಹಾರ?

29-07-rama-coconut
Published on

* ಮಾವು- ತೆಂಗು ಬೆಳೆಗಾರರ ಕಾಯುವಿಕೆಗೆ ಇಲ್ಲ ಕೊನೇ

* 89 ಕೋಟಿ ರೂ. ಗೆ ಬೇಡಿಕೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಬೇಸಿಗೆ ಈ ಬಾರಿ ರೈತರನ್ನು ಹೈರಾಣಿಗಿಸಿತು. ಇದರ ನಡುವೆ ಸರ್ಕಾರ ಒಂದಿಷ್ಟು ಪರಿಹಾರ ಕೊಡುತ್ತದೆ ಎನ್ನುವ ರೈತರ ನಿರೀಕ್ಷೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆಯೇ ಜಿಲ್ಲೆಗೆ ನೀಡಬೇಕಾದ ಸುಮಾರು 89 ಕೋಟಿ ರೂ. ಪರಿಹಾರ ಮೊತ್ತ ಜಿಲ್ಲೆಯ ರೈತರ ಕೈಸೇರಿಲ್ಲ. ಇದಕ್ಕಾಗಿ ರೈತರು ಕಾದು ಕೂರುವಂತಾಗಿದೆ.

ರಾಜ್ಯದಲ್ಲಿ ಮುಂಗಾರು ಅಬ್ಬರಿಸುತ್ತಿದೆ. ಆದರೆ, ರಾಮನಗರ ಜಿಲ್ಲೆಗೆ ಮಾತ್ರ ಮಳೆ ಕೊರತೆ ಕಾಡುತ್ತಿದೆ. ಇದು ಪ್ರಮುಖವಾಗಿ ಮಾವು ಮತ್ತು ತೆಂಗು ಬೆಳೆಗಾರರ ನಿದ್ದೆ ಕೆಡಿಸಿದ್ದು, ಅತ್ತ ಕಳೆದ ಬಾರಿ ನಷ್ಟದ ಪರಿಹಾರವೂ ಇಲ್ಲದೆ, ಇತ್ತ ಮಳೆಯೂ ಇಲ್ಲದೆ ಪರಿತಪಿಸುತ್ತಿದ್ದಾರೆ.

ನಷ್ಟ ಆಗಿರೋದು ಇಷ್ಟು

ಕಳೆದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ದಾಟಿತ್ತು. ಇದು ಮನುಷ್ಯರನ್ನಷ್ಟೇ ಅಲ್ಲ, ಮರಗಿಡಗಳನ್ನು ಸಹ ಬಾಧಿಸಿತ್ತು. ಅದರಲ್ಲೂ ಜಿಲ್ಲೆಯ ಪ್ರಮುಖ ಬೆಳೆಗಳಾದ ಮಾವು ಮತ್ತು ತೆಂಗು ನೆಲ ಕಚ್ಚುವಂತೆ ಆಗಿ ರೈತರಿಗೆ ಭಾರಿ ನಷ್ಟ ಉಂಟಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಈ ಎರಡೂ ತೋಟಗಾರಿಕೆ ಬೆಳೆಗಳ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತ್ತು. ಇದರಂತೆ ಜಿಲ್ಲೆಯಲ್ಲಿ ಅಂದಾಜು 212 ಕೋಟಿ ರೂ. ನಷ್ಟ ಉಂಟಾಗಿದೆ ಎನ್ನುವ ವರದಿಯನ್ನು ಇಲಾಖೆ ಜಿಲ್ಲಾಡಳಿತಕ್ಕೆ ನೀಡಿತ್ತು.

ಇದರಲ್ಲಿ 25640 ಹೆಕ್ಟೇರ್ ಪ್ರದೇಶದ 2.35 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆ ನಷ್ಟವಾಗಿ ರೈತರಿಗೆ ಅಂದಾಜು 103.33 ಕೋಟಿ ರೂ. ನಷ್ಟವಾಗಿದೆ. ಜಿಲ್ಲೆಯ 13628 ಹೆಕ್ಟೇರ್ ಪ್ರದೇಶದ 1090 ಲಕ್ಷ ಕಾಯಿಗಳ ನಷ್ಟವಾಗಿ ಅಂದಾಜು 109.11 ಕೋಟಿ ರೂ. ಮಣ್ಣು ಪಾಲಾಗಿದೆ ಎಂದು ವರದಿಯನ್ನು ಸರ್ಕಾರಕ್ಕೆ ನೀಡಿತ್ತು.

ಯಾವುದೇ ಸೂಚನೆ ಇಲ್ಲ

ಮಾವು ಮತ್ತು ತೆಂಗು ಬೆಳೆಯಿಂದ ಅಂದಾಜು 212 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿರುವ ಜಿಲ್ಲಾಡಳಿತ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿಯಂತೆ 88.32 ಕೋಟಿ ರೂ. ಗಳನ್ನು ಪರಿಹಾರವಾಗಿ ನೀಡುವಂತೆ ಕೋರಿದೆ. ಹೀಗೆ ಮನವಿ ಮಾಡಿ ಬಹುತೇಕ 2 ತಿಂಗಳು ಕಳೆಯುತ್ತಾ ಬಂದಿದ್ದರೂ ಈವರೆಗೂ ಸರ್ಕಾರದಿಂದ ರೈತರಿಗೆ ಪರಿಹಾರ ನೀಡುವ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಅಲ್ಲದೆ, ಈ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತದೆ ಇರುವುದು ವಿರ್ಪಯಾಸ.

ಏಕಿಷ್ಟು ಅಂತರ?

ತೋಟಗಾರಿಕೆ ಇಲಾಖೆಯೇ ತನ್ನ ವರದಿಯಲ್ಲಿ ಮಾವು ಮತ್ತು ತೆಂಗು ಬೆಳಗಾರರಿಗೆ ಅಂದಾಜು 212 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಿದೆ. ಆದರೆ ಮತ್ತೊಂದು ಕಡೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಕೇವಲ 89 ಕೋಟಿ ರೂ. ಪರಿಹಾರ ಬೇಡಿಕೆ ಇಟ್ಟಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ರೈತರಿಗೆ ಆಗಿರುವ ಸಂಪೂರ್ಣ ನಷ್ಟವನ್ನು ತುಂಬಿಕೊಡುವ ಬೇಡಿಕೆಯೂ ಹೆಚ್ಚಿದೆ.

ಕಳೆದ ಬೇಸಿಗೆಯಲ್ಲಿ ತೆಂಗು ಮತ್ತು ಮಾವು ಬೆಳೆಗಾರರಿಗೆ ಉಂಟಾದ ನಷ್ಟದ ಪರಿಹಾರ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಿ ತಿಂಗಳುಗಳೇ ಕಳೆದಿವೆ. ಸರ್ಕಾರ ಕೂಡಲೇ ಜಿಲ್ಲೆಯ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು. ಹಾಗೂ ಸಂಪೂರ್ಣ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಸಿ.ಪುಟ್ಟಸ್ವಾಮಿ, ರೈತ ಸಂಘದ ಮುಖಂಡ ---

ಜಿಲ್ಲೆಯಲ್ಲಿ ಮಾವು ಮತ್ತು ತೆಂಗು ನಷ್ಟದ ಮಾಹಿತಿ

ತಾಲೂಕು ವಿಸ್ತೀರ್ಣ (ಹೆ) ನಷ್ಟ (ಕೋ.) ಕೋರಿಕೆ (ಕೋ.)

ತೆಂಗು-ಮಾವು ತೆಂಗು-ಮಾವು ತೆಂಗು-ಮಾವು

ರಾಮನಗರ 1679 - 8505 13.43 - 33.30 3.77 - 19.13

ಚನ್ನಪಟ್ಟಣ 6708 - 6033 53.66 - 26.54 15.09 - 13.57

ಮಾಗಡಿ 1267 - 6540 10.13 - 26.23 2.85 - 14.71

ಕನಕಪುರ 3974 - 4562 31.79 - 17.26 8.94 - 10.26

ಒಟ್ಟು 13628 - 25640 109.01 - 103.33 30.65 - 57.67

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net