

ಅನಾರೋಗ್ಯಕ್ಕೀಡಾಗುತ್ತಿರುವ ನಗರವಾಸಿಗಳು ಬೀದಿಬದಿ ವ್ಯಾಪಾರಕ್ಕೂ ಹೊಡೆತ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನಗರದಲ್ಲಿ ರಸ್ತೆಗಳು ಧೂಳುಮಯವಾಗಿದ್ದು, ರಸ್ತೆಧೂಳಿನಿಂದ ಆರೋಗ್ಯ ಸಮಸ್ಯೆ ಎದುರಾಗಿವೆ. ಕೂಡಲೇ ರಸ್ತೆ ಅಭಿವೃದ್ಧಿಗೆ ನಗರಸಭೆ ಮುಂದಾಗಿ ಧೂಳಿಗೆ ಮುಕ್ತಿ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರದಲ್ಲಿ ಪ್ರಮುಖವಾಗಿ ರೈಲ್ವೆ ನಿಲ್ದಾಣ-ನಗರಸಭೆ ರಸ್ತೆ, ಐಜೂರು ಭಾಗ, ಮಲ್ಲೇಶ್ವರ ದೇವಸ್ಥಾನ ರಸ್ತೆ, ಮಂಡೀಪೇಟೆ, ಬಾಲಗೇರಿ ರಸ್ತೆ, ಹುಣಸನಹಳ್ಳಿ ರಸ್ತೆ, ಕೊತ್ತೀಪುರ, ಅರ್ಕೇಶ್ವರ ಕಾಲನಿ, ಮಂಜುನಾಥನಗರ, ರಂಗರಾಯರದೊಡ್ಡಿ ರಸ್ತೆ, ಛತ್ರದ ಬೀದಿ, ಬಳೇಪೇಟೆ, ಅರಳೇಪೇಟೆ ಸೇರಿ ವಿವಿಧ ಸ್ಥಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರು ಸಂಪರ್ಕ ಇತರ ಕಾಮಗಾರಿಗೆ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಲಾಗಿದೆ. ನಂತರ ರಸ್ತೆ ಸರಿಪಡಿಸದೆ ಮಣ್ಣು ಹಾಕಲಾಗಿದೆ. ರಸ್ತೆಗೆ ಸಿಮೆಂಟ್ ಇಲ್ಲವೇ ಡಾಂಬರೀಕರಣ ಮಾಡಿಲ್ಲ. ಇದರಿಂದ ನಗರದ ಬಹುತೇಕ ರಸ್ತೆಗಳು ಮಣ್ಣಿನ ರಸ್ತೆಗಳಾಗಿವೆ. ಚರಂಡಿ, ಪೈಪ್‌ಲೈನ್ ಕೆಲಸ ಮುಗಿದರೂ ರಸ್ತೆ ಅಭಿವೃದ್ಧಿಗೆ ನಗರಸಭೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.
ಆದರೆ ನಗರಸಭೆ ಹೇಳುವುದೇ ಬೇರೆ. ಕುಡಿಯುವ ನೀರಿನ ಸಂಪರ್ಕದ ಸಣ್ಣಪುಟ್ಟ ಕೆಲಸಗಳು, ಚರಂಡಿ ಕಾಮಗಾರಿ ನಡೆಯುತ್ತಿವೆ. ಅವೆಲ್ಲವೂ ಮುಗಿದಮೇಲೆ ರಸ್ತೆ ಅಭಿವೃದ್ಧಿ ಆಗುತ್ತದೆ ಎಂಬುದು ನಗರಸಭೆ ವಾದ. ಪ್ರತಿನಿತ್ಯ ರಸ್ತೆಯಲ್ಲಿ ಧೂಳು ಏಳುತ್ತಿದ್ದು, ಸ್ಥಳೀಯ ನಿವಾಸಿಗಳು, ವ್ಯಾಪಾರಸ್ಥರು, ಓಡಾಟ ನಡೆಸುವ ಸಾರ್ವಜನಿಕರಿಗೆ ಧೂಳು ಸಮಸ್ಯೆ ತಂದೊಡ್ಡಿದೆ.
ರಸ್ತೆಗಳು ಧೂಳು, ಗುಂಡಿಮಯವಾಗಿದ್ದು, ತ್ವರಿತ ಕಾಮಗಾರಿಗೆ ಆದ್ಯತೆ ನೀಡಬೇಕು. ಪ್ರಸ್ತುತ ಮಳೆಗಾಲವಾಗಿದ್ದು, ರಸ್ತೆಯಲ್ಲಿ ನೀರು ನಿಲ್ಲುವ ಕಾರಣ ಮಣ್ಣಿನಲ್ಲಿ ವಾಹನಗಳು ಓಡಾಟ ನಡೆಸಿ ರಸ್ತೆ ಕೆಸರುಮಯವಾಗುತ್ತದೆ. ಜತೆಗೆ ಒಂದೆರಡು ತಿಂಗಳಲ್ಲಿ ನಗರ ದೇವತೆಗಳ ಹಬ್ಬ ಸಮೀಪಿಸುವ ಕಾರಣ ನಗರಸಭೆಯು ಮೀನಮೇಷ ಏಣಿಸದೆ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ನಗರವಾಸಿಗಳು ಆಗ್ರಹಿಸುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಚಟುವಟಿಕೆ ನಡೆಯುವ ಬೀದಿಗಳಲ್ಲೇ ರಸ್ತೆ ಅಗೆಯಲಾಗಿದೆ. ರಸ್ತೆಯಲ್ಲಿ ಗಾಳಿ ಎದ್ದರೆ ಸಾಕು ಅಂಗಡಿಗಳಿಗೆ ಧೂಳು ವೇಗವಾಗಿ ನುಗ್ಗುತ್ತದೆ. ಧೂಳಿನಿಂದ ಕಂಗೆಟ್ಟ ವ್ಯಾಪಾರಸ್ಥರು ಪ್ಲಾಸ್ಟಿಕ್ ಹೊದಿಕೆ ಹಾಕಿ ವ್ಯಾಪಾರ ಮಾಡುವಂತಾಗಿದೆ. ನಗರದ ಬಹುತೇಕ ಅಂಗಡಿಗಳಲ್ಲಿ ಇಂತಹ ಚಿತ್ರಣ ಕಂಡುಬರುತ್ತದೆ.