

ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದ್ದು, ವೃತ್ತದ ಅಭಿವೃದ್ಧಿಗೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಶಿಡ್ಲಘಟ್ಟ-ಹೊಸಕೋಟೆ, ಕೋಲಾರ-ವಿಜಯಪುರ ಸೇರಿ ವಿವಿಧೆಡೆ ಸಂಪರ್ಕ ಕಲ್ಪಿಸುವ ಜಂಗಮಕೋಟೆ ಕ್ರಾಸ್‌ನಲ್ಲಿ ಬಸ್ ತಂಗುದಾಣ, ಕುಡಿಯುವ ನೀರಿನ ಸೌಲಭ್ಯ, ನೆರಳಿನ ವ್ಯವಸ್ಥೆ, ಶೌಚಗೃಹ ಸೇರಿ ಯಾವುದೂ ಇಲ್ಲ.
ಸರ್ಕಲ್‌ನಲ್ಲಿ ಪ್ರಯಾಣಿಕರ ತಂಗುದಾಣ ಇಲ್ಲದ ಕಾರಣ ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿಗಾಗಿ ರಸ್ತೆಯ ಬದಿಯಲ್ಲೇ ನಿಲ್ಲಬೇಕು. ಸುಡುವ ಬಿಸಿಲಿನಲ್ಲಿ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ನಿಂತು ಮಹಿಳೆಯರು ಹೈರಾಣಾಗುತ್ತಿದ್ದಾರೆ. ಇನ್ನು ಬಸ್ಸುಗಳು ಬಂದರೂ ರಸ್ತೆಯಲ್ಲೇ ನಿಲ್ಲುತ್ತವೆ. ಇದರಿಂದ ಸಂಚಾರ ಸಿಕ್ಕು ಉಂಟಾಗಿ ಇತರ ವಾಹನ ಸವಾರರೂ ಪರದಾಡುವಂತಾಗಿದೆ. ಆದರೂ ಅಧಿಕಾರಿಗಳು ಜಂಗಮಕೋಟೆ ಕ್ರಾಸ್ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಹೆಚ್ಚುತ್ತಿವೆ ಕಳ್ಳತನ ಪ್ರಕರಣಗಳು: ಜಂಗಮಕೋಟೆ ಕ್ರಾಸ್ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ರಸ್ತೆಯುದ್ದಕ್ಕೂ ಹೆಚ್ಚು ಬೆಳಕು ನೀಡುವ ಬೀದಿದೀಪಗಳನ್ನು ಅಳವಡಿಸಬೇಕಿದೆ. ರಾತ್ರಿ ವೇಳೆ ಕಡಿಮೆ ಬೆಳಕಿರುವ ಕಾರಣ, ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬೀದಿದೀಪಗಳನ್ನು ರಿಪೇರಿ ಮಾಡಿಸಬೇಕಿದೆ.
ಪೊಲೀಸ್ ಬೀಟ್ ಇಲ್ಲ
ಜಂಗಮಕೋಟೆ ವೃತ್ತ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ವೃತ್ತ. ಆದರೂ ಇಲ್ಲಿ ನಾಗರಿಕರ ರಕ್ಷಣೆಗೆ ಯಾವೊಬ್ಬ ಪೊಲೀಸರನ್ನು ಇಲಾಖೆ ನಿಯೋಜಿಸಿಲ್ಲ. ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪದ ಸುತ್ತಲೂ ಕಟ್ಟಿರುವ ತಡೆಗೋಡೆಯ ಕಲ್ಲುಗಳು ಕಿತ್ತುಹೋಗಿದ್ದು, ತಾತ್ಕಾಲಿಕವಾಗಿ ತಡೆಗೋಡೆಗೆ ಜೋಡಿಸಲಾಗಿದೆ. ಜೋರಾಗಿ ಗಾಳಿ ಬಂದರೆ ತಡೆಗೋಡೆ ಸಮೇತ ಹೈಮಾಸ್ಟ್ ದೀಪ ಅಲುಗಾಡುತ್ತದೆ. ವೃತ್ತದ ಹೈಮಾಸ್ಟ್ ದೀಪದ ಕಂಬದಲ್ಲಿ ಸಿ.ಸಿ.ಕ್ಯಾಮಾರಾ ಅಳವಡಿಸಲಾಗಿದೆಯಾದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಈ ವೃತ್ತದ ಮೂಲಕ ಹಾದುಹೋಗುವಂತಹ ಅಪರಿಚಿತರನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ.
ಜಂಗಮಕೋಟೆ ವೃತ್ತದಲ್ಲಿ ಶಿಡ್ಲಘಟ್ಟ, ವಿಜಯಪುರ, ಕೋಲಾರ, ಹೊಸಕೋಟೆ ಕಡೆಗಳಿಗೆ ಹೋಗುವ ಪ್ರಯಾಣಿಕರು ನಿಲ್ಲಲು ನಾಲ್ಕೂ ಕಡೆಗಳಲ್ಲಿ ತಂಗುದಾಣಗಳನ್ನು ನಿರ್ಮಿಸಬೇಕು. ಶೌಚಗೃಹ, ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಸುರಕ್ಷಾ ದೃಷ್ಟಿಯಿಂದ ಕ್ರಾಸ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. -ಗಣೇಶ್ ಸ್ಥಳೀಯ ನಿವಾಸಿ