ಸಿಸಿ ಕ್ಯಾಮೆರಾ ಅಳವಡಿಕೆ ಯಾವಾಗ? ಕುದೂರು ಸಾರ್ವಜನಿಕರ ಪ್ರಶ್ನೆ

CCTV
Published on

ಶ್ರೇಯಸ್ ಕಾಗಿಮಡು ಕುದೂರು

ಗ್ರಾಮದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ನಾಲ್ಕು ತಿಂಗಳ ಹಿಂದೆಯೇ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಇದುವರೆಗೂ ಕ್ಯಾಮೆರಾ ಅಳವಡಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ಕಂದಾಯ ಸಂಗ್ರಹವಾಗುವ ಮತ್ತು ಅತಿ ಹೆಚ್ಚು ಆದಾಯ ಇರುವ ಗ್ರಾಮ ಪಂಚಾಯಿತಿ ಕುದೂರು. ಊರು ದಿನೇದಿನೆ ಬೆಳೆಯುತ್ತಿದ್ದು, ವ್ಯಾಪಾರಕ್ಕೆಂದು ಬರುವ ಹೊರಗಿನ ಜನರು ಗ್ರಾಮದಲ್ಲೇ ನೆಲೆಯೂರುತ್ತಿದ್ದಾರೆ. ಹೀಗಾಗಿ ಗ್ರಾಮದ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಜತೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಮದಲ್ಲಿ ಕಳವು ಪ್ರಕರಣಗಳು, ಅಪಘಾತಗಳು ಜತೆಗೆ ಗಾಂಜಾ, ಅಪೀಮಿನಂತಹ ಮಾದಕ ವಸ್ತುಗಳು ಗ್ರಾಮದ ಯುವಕರ ಕೈಸೇರುತ್ತಿರುವುದು ಹೆಚ್ಚಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆತಂಕ್ಕೆ ಕಾರಣವಾಗಿದೆ. ಇವೆಲ್ಲದಕ್ಕೂ ಪೂರ್ಣ ವಿರಾಮ ಹಾಕಲು ಗ್ರಾಮದ ಆಯ್ದ 38 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಪಂಚಾಯಿತಿ ನಿರ್ಣಯ ಕೈಗೊಂಡಿತ್ತು. ಆದರೆ ಇದುವರೆಗೂ ಆ ಕೆಲಸ ಕಾರ್ಯಗತವಾಗಿಲ್ಲ.

ಸಿಸಿ ಕ್ಯಾಮೆರಾ ಕೆಲಸ ಹೇಗೆ?

ಗ್ರಾಮದ ಯಾವ ಸ್ಥಳಗಳಲ್ಲಿ ಕ್ಯಾಮೆರಾ ಆಳವಡಿಸಬೇಕು, ಅವು ಹೇಗೆ ಕಾರ್ಯನಿರ್ವಹಿಸುತ್ತವೆ, ಅದರ ನಿರ್ವಹಣೆ ಯಾರು ಮಾಡಬೇಕು, ಅವುಗಳ ಬೆಲೆ ಎಷ್ಟು ಎಂಬೆಲ್ಲ ವಿವರಗಳನ್ನು ಈ ಹಿಂದೆ ನಡೆದ ಪಂಚಾಯಿತಿ ಸಭೆಯಲ್ಲಿ ಸದಸ್ಯೆ ಲತಾ ಗಂಗಯ್ಯ ವಿವರವಾಗಿ ತಿಳಿಸಿದ್ದರು. ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ತಿಳಿಸಿದ್ದರು. ಈ ನಿಟ್ಟಿನಲ್ಲಿ ಪಂಚಾಯಿತಿ ಒಮ್ಮತದ ನಿರ್ಣಯ ಕೈಗೊಂಡಿತ್ತು.

ಇಒ ಅನುಮತಿ - ಆಮೆ ಗತಿ

ಪಂಚಾಯಿತಿ ಒಪ್ಪಿಗೆ ಪಡೆದು ಹಣಕ್ಕಾಗಿ ತಾಲೂಕು ಪಂಚಾಯಿತಿ ಅನುಮೋದನೆ ಪಡೆಯಲು ಎರಡು ತಿಂಗಳಾಯಿತು. ಒಂದೊಂದು ಕೆಲಸವೂ ಹೀಗೆ ಆಮೆ ಗತಿಯಲ್ಲಿ ಸಾಗಿದರೆ ಗ್ರಾಮ ಅಭಿವೃದ್ದಿ ಹೊಂದುವುದಾದರೂ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಷ್ಟು ಅಪರಾಧ ಪ್ರಕರಣಗಳು ಮರುಕಳಿಸಿ ಗ್ರಾಮದ ನೆಮ್ಮದಿ ಕದಡುವವರೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕಾಣುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಸಿ ಕ್ಯಾಮೆರಾ ಅಳವಡಿಕೆಗೆ ಅಧಿಕಾರಿಗಳಿಂದ ಗ್ರಾಪಂಗೆ ಅನುಮೋದನೆ ದೊರಕಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಅಳವಡಿಕೆ ಕಾರ್ಯ ತಡವಾಗಿದೆ. ಸದ್ಯದಲ್ಲಿಯೇ ನೂತನ ಪಿಡಿಒ ಅಧಿಕಾರ ಸ್ವೀಕರಿಸುತ್ತಿದ್ದು, ಶೀಘ್ರದಲ್ಲಿಯೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ವೆಂಕಟೇಶ್. ಪಿಡಿಒ, ಕುದೂರು ಗ್ರಾಪಂ

ಶಾಸಕರು, ಸಂಸದರು ಗಮನ ಹರಿಸಬೇಕು ಕುದೂರು ಗ್ರಾಮಕ್ಕೆ ಜನಸ್ಪಂದನ ಸಭೆಗೆ ಆಗಮಿಸುವ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ ಅವರು, ನವೆಂಬರ್ ಅಂತ್ಯದೊಳಗೆ ಕುದೂರು ಗ್ರಾಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಪಂಚಾಯಿತಿ ಆಡಳಿತಕ್ಕೆ ತಿಳಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸೂಚಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಆಗಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net