ಏನಾದರೂ ಆಗಲಿ, ಕೋಳಿಗಳನ್ನು ಹಿಡಿಯಿರಿ

FotoJet (1)
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿಗಳನ್ನು ಹಿಡಿದು ಮಣ್ಣಿನಲ್ಲಿ ಮುಚ್ಚುತ್ತಿರುವ ಪಶುಪಾಲನಾ ಇಲಾಖೆ ಸಿಬ್ಬಂದಿ.
Published on

ಚಿಕ್ಕಬಳ್ಳಾಪುರ: ಹಕ್ಕಿಜ್ವರ ಪ್ರಕರಣ ವರದಿಯಾದ ತಾಲೂಕಿನ ವರದಹಳ್ಳಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಕೋಳಿಗಳನ್ನು ಹಿಡಿದು ಕೊಲ್ಲುವ ಕಾರ್ಯಾಚರಣೆಯನ್ನು ಶುಕ್ರವಾರ ಕೈಗೊಳ್ಳಲಾಯಿತು.

ಏನಾದರೂ ಆಗಲಿ, ಗ್ರಾಮದಲ್ಲಿ ಎಲ್ಲ ಕೋಳಿಗಳು ನಿಮ್ಮ ಬಳಿ ಇರಬೇಕು, ಯಾವುದನ್ನು ಬಿಡಬಾರದು. ಇದು ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ಶುಕ್ರವಾರ ಪಶುಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆ ಉಪ ನಿರ್ದೇಶಕ ರಂಗಪ್ಪ ಅವರಿಗೆ ಸೂಚಿಸಿದ ಪರಿ. ಹಕ್ಕಿಜ್ವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

ಈ ಮೇರೆಗೆ ಗ್ರಾಮದಲ್ಲಿ ಸಾಕಿದ್ದ ಎಲ್ಲ ಕೋಳಿಗಳನ್ನು ಉಪ ವಿಭಾಗಾಧಿಕಾರಿ ಡಿ.ಎಚ್​.ಅಶ್ವಿನ್​, ಪಶುಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆಯ ರಂಗಪ್ಪ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಯಿತು. ಕಾರ್ಯಾಚರಣೆ ಬೆನ್ನಲ್ಲೇ ಕೆಲವರು ಕೋಳಿಗಳನ್ನು ಬೇರೆಯವರಿಗೆ ಕೊಟ್ಟು ಕಳುಹಿಸಿರುವ ಮಾತುಗಳು ಕೇಳಿ ಬಂದವು.

ಆತಂಕಪಡುವ ಅಗತ್ಯವಿಲ್ಲ : ಕೋಳಿಗಳಲ್ಲಿ ಮಾತ್ರ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಪ್ರಸ್ತುತ ಜನರಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಇದರಿಂದ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸೋಂಕು ಪ್ರಕರಣ ದೃಢಪಡುತ್ತಿದ್ದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಮಾರ್ಗಸೂಚಿ : ಸಾಂಕ್ರಾಮಿಕ ಹಕ್ಕಿ ಜ್ವರ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜ್ವರದ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಆಸ್ಪತ್ರೆ ವೈದ್ಯರಿಗೆ ಮಾಹಿತಿ ನೀಡುವುದು, ಸೋಂಕಿತ ಪ್ರದೇಶಗಳಿಂದ ದೂರ ಉಳಿಯುವುದು, ಸ್ವಚ್ಛತೆಗೆ ಆದ್ಯತೆ, ಕೋಳಿ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಸೇರಿ ಹಲವು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ.

ಕೋಳಿಗಳ ಸಾವು: ವರದಹಳ್ಳಿಯಲ್ಲಿ 30ರಿಂದ 32 ಕೋಳಿಗಳು ಏಕಕಾಲದಲ್ಲಿ ಮೃತ ಪಟ್ಟಿವೆ. ಇವುಗಳ ಮಾದರಿಯನ್ನು ಬೆಂಗಳೂರಿನ ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಯಲ್ಲಿ ಮತ್ತು ಭೂಪಾಲ್​ನಲ್ಲಿರುವ ಹೈ ಸೆಕ್ಯುರಿಟಿ ಪಶುವೈದ್ಯಕಿಯ ಪ್ರಯೋಗಾಲಯದಲ್ಲಿ ಪರೀಸಿದ್ದು, ಕೋಳಿಗಳ ಸಾವಿಗೆ ಹಕ್ಕಿ ಜ್ವರ ಕಾರಣ ಎನ್ನುವುದು ದೃಢಪಟ್ಟಿದೆ.

ಬಾಡೂಟ ಸೇವನೆ ಆತಂಕ: ಮಹಾಶಿವರಾತ್ರಿ ಹಬ್ಬಕ್ಕೆ ಮೊದಲು ಮುನಿದ್ಯಾವರ, ಮನೆಯ ವಿಶೇಷ ಕಾರ್ಯಕ್ರಮ, ಪಾರ್ಟಿ ಹಿನ್ನೆಲೆಯಲ್ಲಿ ಕೋಳಿ ಮಾಂಸ ಸೇವಿಸಿದ್ದವರಲ್ಲಿ ಆತಂಕ ಮೂಡಿದೆ. ಗ್ರಾಮದಲ್ಲಿದ್ದ ಬಹುತೇಕರು ಭಾನುವಾರ, ಮಂಗಳವಾರ ಬಾಡೂಟ ಸವಿದಿದ್ದಾರೆ. ಇದರ ನಡುವೆ ಗುರುವಾರ ಕೋಳಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ರ್ನಿಬಂಧದ ಆದೇಶ: ಹಕ್ಕಿ ಜ್ವರ ಸೋಂಕು ಪ್ರಕರಣ ದೃಢಪಟ್ಟಹಿನ್ನೆಲೆಯಲ್ಲಿ ವರದಹಳ್ಳಿಯಿಂದ ಹೊರ ಭಾಗಕ್ಕೆ, ಈ ಗ್ರಾಮಕ್ಕೆ ಹೊರಗಡೆಗೆ ಹಕ್ಕಿಗಳ ಸಾಗಣೆ ನಿಷೇಧಿಸಲಾಗಿದೆ. ಗ್ರಾಮದ 1 ಕಿ.ಮೀ ವ್ಯಾಪ್ತಿಯಲ್ಲಿ ರ್ನಿಬಂಧದ ಆದೇಶ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ತಿಳಿಸಿದ್ದಾರೆ.

ಎಲ್ಲೆಡೆ ಅರ್ಲಟ್ : ಹಕ್ಕಿಜ್ವರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅರ್ಲಟ್​ ಆಗಿದ್ದು, ಸೋಂಕು ಪತ್ತೆಯಾದ ಪ್ರದೇಶದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಆರೋಗ್ಯ ಸಮೀೆ, ಕೋಳಿ ಸಾಕಣೆ ಕೇಂದ್ರಗಳಿಗೆ ಸೋಂಕಿನ ಮಾಹಿತಿ ರವಾನೆ, ನಂಜು ನಿವಾರಕಗಳಿಂದ ಶುಚಿತ್ವ ನಿರ್ವಹಣೆ, ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ದಾಸ್ತಾನು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವಿಶೇಷ ಹಾಸಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಆಂಧ್ರ, ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯಗಳಿಂದ ಬರುವ ಕೋಳಿ ಸಾಗಣೆ ವಾಹನಗಳ ಮೇಲೆ ನಿಗಾ ಇಡಲಾಗಿದೆ.

ಗರ್ಭಿಣಿಯರ ಮೇಲೆ ನಿಗಾ: ವರದಹಳ್ಳಿಯಲ್ಲಿ 432 ಜನಸಂಖ್ಯೆ ಇದ್ದು, 92 ಮನೆಗಳಿವೆ. ಹಕ್ಕಿಜ್ವರ ಸಂಬಂಧ ಪ್ರಯೋಗಾಲಯ ವರದಿ ಬರುತ್ತಿದ್ದಂತೆ ಗ್ರಾಮದ ಪ್ರತಿ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸುವ ಜತೆಗೆ ಅರಿವು ಮೂಡಿಸಲಾಗಿದೆ. ಗ್ರಾಮದಲ್ಲಿ ನಂಜು ನಿವಾರಕ ರಾಸಾಯನಿಕ ಸಿಂಪಡಿಸಲಾಗಿದೆ. ಗ್ರಾಮದ ಇಬ್ಬರು ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಪ್ರಸ್ತುತ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೀಕರಿಗೆ ಪರಿಹಾರ : ಪಶುಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆ ಗಣತಿ ಪ್ರಕಾರ ಗ್ರಾಮದಲ್ಲಿ 402 ಕೋಳಿಗಳಿವೆ. ಇವುಗಳನ್ನು ಹಿಡಿದುಕೊಂಡು ಸಾಯಿಸಿದ ಬಳಿಕ ವೈಜ್ಞಾನಿಕವಾಗಿ ವಿಲೇವಾರಿಗೊಳಿಸಲಾಗುತ್ತಿದೆ. ಗ್ರಾಮದ ಹೊರಭಾಗದಲ್ಲಿ ಸತ್ತ ಕೋಳಿಗಳನ್ನು ಹೂಳಲಾಗುತ್ತಿದೆ. ಪ್ರಸ್ತುತ ಸಾಕಣೆ ಮಾಡಿರುವ ಕೋಳಿಗಳನ್ನು ಇಲಾಖೆಯು ಪಡೆದುಕೊಂಡಿದ್ದು, ಪ್ರತಿ ಕೋಳಿಗೆ ನಿಯಮಾನುಸಾರ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಸೋಂಕು ದೃಢಪಟ್ಟ 90 ದಿನಗಳೊಳಗೆ ಕೋಳಿಗಳನ್ನು ಹಸ್ತಾಂತರಿಸಬೇಕು. ಬಳಿಕ ಯಾವುದೇ ಕಾರಣಕ್ಕೂ ನೆರವು ಸಿಗುವುದಿಲ್ಲ. ಸೋಂಕಿತ ಪ್ರದೇಶದಲ್ಲಿನ ಎಲ್ಲ ಕೋಳಿಗಳನ್ನು ಸಾಯಿಸಿ, ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತದೆ ಎಂದು ಪಶುಪಾಲನಾ ಮತ್ತು ವೈದ್ಯಕಿಯ ಇಲಾಖೆ ಉಪ ನಿರ್ದೇಶಕ ರಂಗಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net