ಮುಂಗಾರು ಅಬ್ಬರಿಸಿದರೆ ಗತಿಯೇನು?

10-05-rama-setuve2
Published on

ಗ್ರಾಮಗಳಿಗೆ ಸಂಪರ್ಕ ಕಡಿತದ ಆತಂಕ

ಕೊಚ್ಚಿಹೋದ ಸೇತುವೆಗಳ ನಿರ್ಮಾಣಕ್ಕೆ ಕಾಯಬೇಕಾದ ಅನಿವಾರ್ಯತೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಮತ್ತೊಂದು ಮಳೆಗಾಲ ಆರಂಭಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಕಳೆದ ಎರಡು ವರ್ಷಗಳ ಹಿಂದೆ ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವಗಳ ನಿರ್ಮಾಣಕ್ಕೆ ಇನ್ನೂ ಒಂದೂವರೆ ವರ್ಷ ಕಾಯಬೇಕಾದ ಅನಿವಾರ್ಯತೆ ಇದೆ.

ಹೌದು, 2021-22ನೇ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗೆ ಸೇರಿದ ಒಟ್ಟು 45 ಸೇತುವೆಗಳು ಮತ್ತು ಪ್ರಮುಖ ಸಂಪರ್ಕ ಮೋರಿಗಳು ಕೊಚ್ಚಿ ಹೋಗಿದ್ದವು. ಇವುಗಳಲ್ಲಿ ಮಾಗಡಿಯ ಮಂಚನಬೆಲೆ ಬಳಿ ತಾವರೆಕೆರೆ - ರಾಮನಗರ ಸಂಪರ್ಕ ಕಲ್ಪಿಸುವ ಸೇತುವೆ, ಸುಗ್ಗನಹಳ್ಳಿ ಬಳಿಯ ಸೇತುವೆ ಹಾಗೂ ಚನ್ನಪಟ್ಟಣದ ಕೊಂಡಾಪುರ ಬಳಿಯ ಸಂಪರ್ಕ ರಸ್ತೆ, ಕನಕಪುರದ ಹಾರೋಬೆಲೆ ಬಳಿಯ ಸೇತುವೆ ಕೊಚ್ಚಿ ಹೋದವುಗಳಲ್ಲಿ ಪ್ರಮುಖವಾದವು.

ಆದರೆ, ಇವುಗಳ ಮರು ನಿರ್ಮಾಣಕ್ಕೆ ಸಂಪುಟ ಅನುಮೋದನೆ ದೊರೆತಿದೆಯಾದರೂ, ಇಲಾಖೆಗಳು ಎಲ್ಲ ಮಾನದಂಡ ಅನುಸರಿಸಿ ನಿರ್ಮಾಣ ಮಾಡಲು ಕನಿಷ್ಠ ಒಂದೂವರೆ ವರ್ಷಗಳ ಅವಧಿ ಬೇಕಿದ್ದು, ಈ ಬಾರಿ ಮುಂಗಾರು ಅಬ್ಬರಿಸಿದರೆ ಮತ್ತೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಳ್ಳುವುದು ಖಚಿತ.

ಕೆಲವಡೆ ನಿರ್ಮಾಣ:

ಕೊಚ್ಚಿ ಹೋದ ಸೇತುವೆಗಳಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿರುವ ರಾಮನಗರದ ಸುಗ್ಗನಹಳ್ಳಿ ಪ್ರಮುಖವಾದದ್ದು. ಸೇತುವೆ ಕುಸಿತದಿಂದಾಗಿ ಬಹುತೇಕ ಹಳ್ಳಿಗಳು ಸಂಪರ್ಕ ಕಡಿತಗೊಂಡಿದ್ದವು. ಕೇವಲ ನೂರು ಇನ್ನೂರು ಮೀಟರ್ ಅಂತರದಲ್ಲಿ ಸುಗ್ಗನಹಳ್ಳಿಗೆ ಕ್ರಮಿಸಬಹುದಾಗಿದ್ದ 20 ಕಿಮೀಗೆ ವಿಸ್ತರಣೆ ಆಗಿತ್ತು. ಆದರೆ, ಈಗ ಇಲ್ಲಿ ಲೋಕೋಪಯೋಗಿ ಇಲಾಖೆ 2 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ದು, ಈ ಭಾಗದ ಜನರಿಗೆ ಕೊಂಚ ನೆಮ್ಮದಿ ತಂದಿದೆ. ಮತ್ತೊಂದೆಡೆ ಚನ್ನಪಟ್ಟಣದ ಕೊಂಡಾಪುರ ಬಾಣಗಹಳ್ಳಿ ಬಳಿ ಸಣ್ಣ ನೀರಾವರಿ ಇಲಾಖೆ ಮೂಲಕ 5.5 ಕೋಟಿ ರೂ. ವೆಚ್ಚದಲ್ಲಿ ಕೊಚ್ಚಿ ಹೋದ ಸೇತುವೆ ಮರು ನಿರ್ಮಾಣ ಕಾರ್ಯ ಆರಂಭಗೊಂಡಿದೆ.

ಸಂಪುಟ ಅನುಮೋದನೆ:

ಚುನಾವಣೆ ಘೋಷಣೆಗೂ ಮುನ್ನಾ ಜಿಲ್ಲೆಯ ಮಾಗಡಿಯ ಮಂಚನಬೆಲೆ, ರಾಮನಗರದ ಸುಗ್ಗನಹಳ್ಳಿ, ಕನಕಪುರದ ಹಾರೋಬೆಲೆ, ಮುಳ್ಳಹಳ್ಳಿ ಕೊಚ್ಚಿ ಹೋಗಿದ್ದ ಸೇತುವೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆ. ಆದರೆ, ನೀತಿ ಸಂಹಿತೆ ಜಾರಿಯಾಗಿದ್ದರಿಂದ ಇನ್ನೂ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ. ಮಂಚನೆಬೆಲೆ ಬಳಿಯ ಸೇತುವೆ ನಿರ್ಮಾಣಕ್ಕೆ 13.60 ಕೋಟಿ ರೂ, ಸುಗ್ಗನಹಳ್ಳಿ ಬಳಿ ಸೇತುವೆಗೆ 10 ಕೋಟಿ ರೂ, ಹಾರೋಬೆಲೆ ಬಳಿ ಸೇತುವೆ ನಿರ್ಮಾಣಕ್ಕೆ 10 ಕೋಟಿ ರೂ, ಹಾಗೂ ಮುಳ್ಳಹಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ 11.60 ಕೋಟಿ ರೂ. ವೆಚ್ಚಕ್ಕೆ ಅನುಮತಿ ನೀಡಲಾಗಿದೆ. ಇದನ್ನು ಬೃಹತ್ ನೀರಾವರಿ ಇಲಾಖೆ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಬೇಕಿದೆ.

ಕೆಲವು ಮರೆತೇ ಹೋಗಿವೆ:

ಅರ್ಕಾವತಿ ನದಿ ಉಕ್ಕಿ ಹರಿದ ಪರಿಣಾಮ ಹರೀಸಂದ್ರ ತಿಮ್ಮೇಗೌಡನದೊಡ್ಡಿ ಸೇತುವೆಯಲ್ಲಿಯೂ ಬಿರುಕು ಕಾಣಿಸಿಕೊಂಡು ಕೆಲವು ಕಡೆಗಳಲ್ಲಿ ರಸ್ತೆಯೂ ಕೊರೆದಿದೆ. ಇದರಿಂದಾಗಿ ಬೂರಗಮರದ ದೊಡ್ಡಿ, ತಿಮ್ಮೇಗೌಡನದೊಡ್ಡಿ, ಎಲೆದೊಡ್ಡಿ ಗ್ರಾಮಗಳ ಜನತೆ ಆತಂಕದಲ್ಲಿಯೇ ಸೇತುವೆ ಮೇಲೆ ಸಂಚಾರ ಮಾಡಬೇಕಿದೆ. ಈ ಸೇತುವೆ ದುರಸ್ಥಿ ಬಗ್ಗೆ ಯಾರೂ ಗಮನ ಹರಿಸಿಲ್ಲ.

ಎಚ್ಚರಿಕೆ ಬೇಕು

ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದು ಸಾಕಷ್ಟು ಅವಾಂತರ ಸೃಷ್ಟಿ ಮಾಡಿದರೂ ಅಚ್ಚರಿ ಇಲ್ಲ. ಭವಿಷ್ಯದಲ್ಲಿ ಬೆಂಗಳೂರು, ರಾಮನಗರ ಸೇರಿ ಹಲವು ಕಡೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಂಚನೆಬೆಲೆ ಜಲಾಶಯದಿಂದ ಹೆಚ್ಚಿನ ನೀರು ಹರಿಯಬಹುದು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆಗಳ ಮೇಲೆ ಓಡಾಡುವ ವಾಹನ ಸವಾರರು ಮತ್ತು ಜನತೆ ಎಚ್ಚರಿಕೆಯಿಂದ ಇರಬೇಕಿದೆ.

ಮಂಚನೆಬೆಲೆ, ಸುಗ್ಗನಹಳ್ಳಿ ಸೇರಿ ನಾಲ್ಕು ಕಡೆಗಳಲ್ಲಿ ಸೇತುವೆಗಳ ಮರು ನಿರ್ಮಾಣಕ್ಕೆ ಸಂಪುಟ ಅನುಮತಿ ನೀಡಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಮೋಹನ್, ಇಇ, ಬೃಹತ್ ನೀರಾವರಿ ಇಲಾಖೆ ರಾಮನಗರಸಣ್ಣ ನೀರಾವರಿ ಇಲಾಖೆಯಿಂದ ಬಾಣಗಹಳ್ಳಿ - ಕೊಂಡಾಪುರ ಬಳಿ ಕಣ್ವಾ ನದಿಗೆ ಅಡ್ಡಲಾಗಿ, ಚೆಕ್‌ಡ್ಯಾಂ ಕಂ ರಸ್ತೆಯನ್ನು 5.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕೊಟ್ರೇಶ್, ಎಇಇ ಸಣ್ಣ ನೀರಾವರಿ ಇಲಾಖೆ, ರಾಮನಗರಲೋಕೋಪಯೋಗಿ ಇಲಾಖೆಯಿಂದ ಸುಗ್ಗನಹಳ್ಳಿ ಬಳಿ 2 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕ ಬಳಕೆಗೂ ಅವಕಾಶ ಮಾಡಿಕೊಡಲಾಗಿದೆ. ಶಂಕರ್, ಇಇ, ಲೋಕೋಪಯೋಗಿ ಇಲಾಖೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net