ಸ್ವಾಮೀಜಿ ಮಾತನಾಡಿದ್ದರಲ್ಲಿ ತಪ್ಪೇನಿದೆ? ಬಾಲಕೃಷ್ಣ

hc balakrishna
Published on

ಮಾಗಡಿ: ತಮ್ಮವರಿಗೆ ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನ ಸಿಗಬೇಕೆಂದು ಆಯಾ ಸಮುದಾಯದ ಸ್ವಾಮೀಜಿಗಳು ಒತ್ತಾಯಿಸುವುದು ಸಹಜ ಎಂದು ಹೇಳುವ ಮೂಲಕ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಹೇಳಿಕೆಯನ್ನು ಕೆಆರ್‌ಡಿಎಲ್ ಅಧ್ಯಕ್ಷ ಎಚ್.ಸಿ.ಬಾಲಕೃಷ್ಣ ಸಮರ್ಥಿಸಿದರು.

ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕು ಎಂಬ ಸ್ವಾಮೀಜಿ ಹೇಳಿಕೆ ಕುರಿತಂತೆ ಶುಕ್ರವಾರ ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರು ಮುಖ್ಯಮಂತ್ರಿಯಾಗಬೇಕು ಎಂಬ ಭಾವನೆ ಸಮುದಾಯದ ಪ್ರತಿಯೊಬ್ಬರಲ್ಲೂ ಇದೆ. ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಇದನ್ನೇ ವ್ಯಕ್ತಪಡಿಸಿದ್ದಾರೆ. ಅದನ್ನು ತಪ್ಪು ಎಂದು ಯಾರೂ ಭಾವಿಸಬಾರದು ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂದು ಅವರ ಸಮುದಾಯದ ಸ್ವಾಮೀಜಿಗಳು ಸಹ ಹಿಂದೆ ಹೇಳಿದ್ದರು. ನಮ್ಮವರೂ ಸಿ.ಎಂ ಆಗಬೇಕೆಂದು ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಪ್ರಸ್ತಾಪಿಸಿದ್ದರು. ಅದೇ ರೀತಿ ಚಂದ್ರಶೇಖರನಾಥ ಸ್ವಾಮೀಜಿ ಒತ್ತಾಯಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಯಾರು, ಏನೇ ಅಭಿಪ್ರಾಯ ಮತ್ತು ಅಭಿಲಾಷೆ ವ್ಯಕ್ತಪಡಿಸಿದರೂ ಮುಖ್ಯಮಂತ್ರಿ ಹುದ್ದೆ ಬಗ್ಗೆ ಹೈಕಮಾಂಡ್ ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ. ಸ್ವಾಮೀಜಿ ಹೇಳಿದ ಮಾತ್ರಕ್ಕೆ ನಾಳೆಯೇ ಶಿವಕುಮಾರ್ ಅವರನ್ನು ಹೈ ಕಮಾಂಡ್ ಮುಖ್ಯಮಂತ್ರಿ ಮಾಡುತ್ತದೆಯೇ? ಎಂದು ಹೇಳಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ತಪ್ಪೇನು? ಹಾಗೆ ಕೇಳಬಾರದು ಅಂತ ಏನಾದರೂ ಇದೆಯಾ? ನೀವು ಹೀಗೆ ಮಾತನಾಡಬೇಕು ಎಂದು ಯಾರು, ಯಾರಿಗೂ ಕಡಿವಾಣ ಹಾಕುವಂತಿಲ್ಲ? ಸಿದ್ದರಾಮಯ್ಯ ಅವರ ನಂತರ ಶಿವಕುಮಾರ್ ಅವರಿಗೆ ಒಂದು ಅವಕಾಶ ಕೊಡಿ ಎಂದಷ್ಟೇ ಸ್ವಾಮೀಜಿ ಕೇಳಿದ್ದಾರೆ. ಅದು ತಪ್ಪಲ್ಲ ಎಂದರು.

ಸ್ವಾಮೀಜಿ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ನಾವು ಕೇಳಿದರೆ ಪೀಠ ಬಿಟ್ಟುಕೊಡುತ್ತಾರೆಯೇ ಎನ್ನುವ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿದ ಬಾಲಕೃಷ್ಣ, ಅವರು ಸ್ವಾಮೀಜಿ ಆಗುವುದಾದರೆ ಆಗಲಿ. ಪೀಠ ಬಿಡುವಂತೆ ನಾವು ಸ್ವಾಮೀಜಿ ಅವರ ಮನವೊಲಿಸುತ್ತೇವೆ ಎಂದರು. ಡಿ.ಕೆ. ಶಿವಕುಮಾರ್ ಅವರೇ ಸ್ವಾಮೀಜಿ ಅವರಿಗೆ ಹೇಳಿ ಹೀಗೆ ಮಾತನಾಡಿಸಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿಕೆಯನ್ನು ಬಾಲಕೃಷ್ಣ ಅಲ್ಲಗಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net