

ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದ್ದು, ರಾತ್ರಿ ಕರ್ಯ್ೂ ಕೂಡ ಜತೆಗೇ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳಷ್ಟೇ ಲಭ್ಯವಾಗಲಿವೆ.
ಆಹಾರ ಪದಾರ್ಥಗಳು, ಔಷಧ, ಪತ್ರಿಕೆ ಮತ್ತಿತರ ಅಗತ್ಯ ವಸ್ತುಗಳಷ್ಟೇ ಲಭ್ಯವಿರಲಿವೆ. ಅವುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ. ಉಳಿದಂತೆ ಶಾಪಿಂಗ್ ಮಾಲ್, ವಾಣಿಜ್ಯ ಮಳಿಗೆಗಳು, ಕಾರ್ಖಾನೆ ಇನ್ನಿತರ ಉದ್ಯಮಗಳನ್ನು ತೆರೆಯುವಂತಿಲ್ಲ. ಅಗತ್ಯ ವಸ್ತುಗಳ ಖರೀದಿ, ಆರೋಗ್ಯ ಸಂಬಂಧಿ ಓಡಾಟ ಹೊರತುಪಡಿಸಿ ಜನರ ಸಂಚಾರಕ್ಕೆ ಅನುಮತಿಯಿಲ್ಲ. ಒಂದು ವೇಳೆ ನಿಯಮ ಉಲ್ಲಂಸಿ ಓಡಾಡುವುದು ಕಂಡುಬಂದರೆ, ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಇದನ್ನೂ ಓದಿರಿ ಪೊಲೀಸ್ ಠಾಣೆಗೇ ‘ಬೇಡಿ’ ಹಾಕಿದ್ರು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…
ಎಲ್ಲ ರೀತಿಯ ಸಾರಿಗೆ ಸೇವೆ ಸ್ಥಗಿತಗೊಳ್ಳಲಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಅದರ ಜತೆಗೆ ನೈಋತ್ಯ ರೈಲ್ವೆ ಕೂಡ ಭಾನುವಾರ ಸೇವೆ ನೀಡುವುದಿಲ್ಲ ಎಂದು ತಿಳಿಸಿದೆ. ಆಟೋಗಳು, ಟ್ಯಾಕ್ಸಿ ಸೇವೆ ಇರುವುದಿಲ್ಲ. ಅಗತ್ಯ ವಸ್ತುಗಳ ಸಾಗಣೆ ಮಾಡುವ ವಾಹನಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಜತೆಗೆ ಅಗತ್ಯ ಸೇವೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಾಗಿ ಬಿಎಂಟಿಸಿ 100 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಿದೆ. ಆ ಬಸ್‌ಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸ್ವಂತ ವಾಹನಗಳಲ್ಲಿಯೂ ಸಂಚರಿಸುವಂತಿಲ್ಲ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೂ ತೆರಳಲು ಸಾಧ್ಯವಿಲ್ಲ. ಜಿಲ್ಲಾ ಗಡಿ ಭಾಗದಲ್ಲಿಯೇ ವಾಹನಗಳನ್ನು ತಡೆದು ವಾಪಸು ಕಳುಹಿಸಲಾಗುತ್ತದೆ. ಇನ್ನು ಓಡಾಟವೇನಿದ್ದರೂ ಸೋಮವಾರ ಬೆಳಗ್ಗೆ 5 ಗಂಟೆಯ ನಂತರವೇ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಔಷಧಾಲಯ, ಆಂಬುಲೆನ್ಸ್, ಹಾಲು, ದಿನಪತ್ರಿಕೆ, ಪೆಟ್ರೋಲ್ ಬಂಕ್, ಆಹಾರ ಮಳಿಗೆಗಳು, ತರಕಾರಿ, ಮಾಂಸ, ಹಣ್ಣಿನ ಮಾರುಕಟ್ಟೆಗಳು ಇರುತ್ತವೆ. ಸರಕು ಸಾಗಣೆಗೆ ಅವಕಾಶವಿರುತ್ತದೆ. ಪೊಲೀಸ್, ಅಗ್ನಿಶಾಮಕ ಸೇವೆ ಇರುತ್ತದೆ. ಬ್ಯಾಂಕ್, ಎಟಿಎಂಗಳು ತೆರೆದಿರಲಿವೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಳಿಗಷ್ಟೆ ಅವಕಾಶ ಇರುತ್ತದೆ. ಆಹಾರ, ಔಷಧಗಳನ್ನು ಮನೆಗೆ ಡೆಲಿವರಿ ಕೊಡಲು ಅವಕಾಶವಿದೆ. ಆದರೆ ವಾಣಿಜ್ಯ ಮಳಿಗೆಗಳು, ವರ್ಕ್‌ಶಾಪ್, ಗೋದಾಮುಗಳು ಕಾರ್ಯ ನಿರ್ವಹಿಸಲ್ಲ. ಅಂತರರಾಜ್ಯ ಮತ್ತು ಅಂತರಜಿಲ್ಲಾ ಸಾರಿಗೆ ಸೇವೆ ರದ್ದಾಗಲಿದೆ. ಶಾಪಿಂಗ್ ಮಾಲ್‌ಗಳನ್ನು ತೆರೆಯುವಂತಿಲ್ಲ. ಮದ್ಯ ಮಾರಾಟ ಮಾಡುವಂತಿಲ್ಲ.