ರೋಗಿಗಳೇ ಬರುತ್ತಿಲ್ಲವೆಂದರೆ ಏನರ್ಥ?

Published on

ಶಿಡ್ಲಟ್ಟ ವೈದ್ಯಾಧಿಕಾರಿಗಳ ವಿರುದ್ಧ ಆಯೋಗದ ಅಧ್ಯಕ್ಷ ಡಾ.ಎಚ್​.ಕೃಷ್ಣ ಅಸಮಾಧಾನ

ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್​.ಕೃಷ್ಣ ಹಾಗೂ ಸದಸ್ಯರ ತಂಡ ಶಿಡ್ಲಟ್ಟ ಸಾರ್ವಜನಿಕ ಆಸ್ಪತ್ರೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡದಿರುವುದು, ಸಣ್ಣ ಪುಟ್ಟ ಕಾರಣಕ್ಕೂ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವುದು ಕಂಡು ಬಂತು. 100 ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ 42 ರೋಗಿಗಳು ಮಾತ್ರ ದಾಖಲಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷರು, ನಿಮ್ಮಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ರೋಗಿಗಳ ಜತೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ನಿಮ್ಮ ಮೇಲೆ ನಂಬಿಕೆ ಇಲ್ಲದ ಕಾರಣ ಈ ಆಸ್ಪತ್ರೆಗೆ

ರೋಗಿಗಳೇ ಬರುತ್ತಿಲ್ಲ ಎಂದು ಕಿಡಿಕಾರಿದರು.

ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ 1 ತಿಂಗಳ ಅವಧಿಯಲ್ಲಿ 17 ಹೆರಿಗೆ ದಾಖಲಾಗಿವೆ ಎಂದರೆ ಏನು ಅರ್ಥ ಎಂದು ವೈದ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಇಡೀ ರಾಜ್ಯದಲ್ಲಿ ಸುತ್ತಾಡಿದ್ದೇನೆ, ಇಷ್ಟು ಕಡಿಮೆ ರೋಗಿಗಳು ದಾಖಲಾಗಿರುವ ಆಸ್ಪತ್ರೆ ಇದು ಎಂದು ಅಸಮಾಧಾನ ಹೊರ ಹಾಕಿದರು. ಸಾಮಾನ್ಯವಾಗಿ ಬಡವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ ಎಂದರೆ ನೀವು ಸರಿಯಾಗಿ ಔಷಧೋಪಚಾರ ಮಾಡುತ್ತಿಲ್ಲ ಎಂದರ್ಥ ಎಂದರು.

ಆರೋಗ್ಯ ರಾ ಅನುದಾನದಲ್ಲಿ ಆಸ್ಪತ್ರೆಯಲ್ಲಿ ಅಗತ್ಯವಿರುವ ಸಣ್ಣ ಪುಟ್ಟ ಪರಿಕರಗಳನ್ನು ಕೂಡ ಖರೀದಿಸದೆ ಸುಮ್ಮನಿದ್ದರೆ ಹೇಗೆ?, ಸಂಬಳಕ್ಕೆ ಕೆಲಸ ಮಾಡಬೇಡಿ, ಸ್ವಲ್ಪ ಮಾನವೀಯತೆಯೂ ಇರಲಿ ಎಂದರು.ಇದಕ್ಕೂ ಮೊದಲು ಆಶ್ರಯ ಬಡಾವಣೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ಇನ್ನಿತರ ಸವಲತ್ತುಗಳ ಮಾಹಿತಿ ಪಡೆದು, ದಾಖಲೆ ಪರಿಶೀಲಿಸಿದರು. ಮಕ್ಕಳ ಪಾಲಕರು ಕರೆ ಮಾಡಿ ಮೊಟ್ಟೆ ಇನ್ನಿತರ ಆಹಾರ ಪದಾರ್ಥಗಳನ್ನು ಕೊಟ್ಟ ಬಗ್ಗೆ ವಿಚಾರಿಸಿದರು. ಈ ವೇಳೆ ಕೆಲವರಿಗೆ ಕಡಿಮೆ ಮೊಟ್ಟೆ ವಿತರಿಸಿರುವುದು ಬೆಳಕಿಗೆ ಬಂತು.

ಕಿತ್ತಾಡಿಕೊಳ್ಳುವ ವೈದ್ಯರು

ಕಾಫಿ ಟೀಗೆಂದು ಹೊರಗೆ ಹೋದರೆ ಗಂಟೆಗಟ್ಟಲೆ ಬರುವುದಿಲ್ಲವಂತೆ, ಜಾಸ್ತಿ ರೋಗಿಗಳು ಬಂದರೆ ನಾವೊಬ್ಬರೇನಾ ಇಲ್ಲಿ ಕೆಲಸ ಮಾಡುವ ಡಾಕ್ಟರ್​ ಎಂದು ಕಿತ್ತಾಡಿಕೊಂಡು ರೋಗಿಗಳನ್ನು ತಪಾಸಣೆ ಮಾಡದೆ ಅಲ್ಲಿಂದ ಎದ್ದು ಹೋಗುತ್ತೀರಂತೆ ಹೌದಾ ಎಂದು ಅಧ್ಯಕ್ಷರು ಪ್ರಶ್ನಿಸಿದರು.ಈ ವೇಳೆ ಹಾಗೇನಿಲ್ಲ ಸಾರ್​ ಎಂದು ವೈದ್ಯರು ಉತ್ತರಿಸಿದರು. ಸುಮ್ಮನೆ ಹೇಳಬೇಡಿ ನಮಗೆ ಸಾರ್ವಜನಿಕರು, ರೋಗಿಗಳು ಲಿಖಿತವಾಗಿ ದೂರು ಕೊಟ್ಟಿದ್ದ್ದಾರೆ. ವೈದ್ಯರು ಮಾತನಾಡಿದ ಆಡಿಯೋ ಕೂಡ ಇದೆ ಎಂದು ಹರಿಹಾಯ್ದರು.

ಯಾರನ್ನು ನಂಬಬೇಕು?

ಅನುದಾನದ ಕೊರತೆಯಿಂದ ಗರ್ಭಿಣಿ, ಬಾಣಂತಿಯರಿಗೆ ತಿಂಡಿ, ಊಟ ನೀಡುತ್ತಿಲ್ಲ ಎಂದು ಆಡಳಿತ ವೈದ್ಯಾಧಿಕಾರಿಗಳು ಹೇಳುತ್ತೀರಿ, ಆದರೆ, ಬಾಣಂತಿಯರು ಬೆಳಗ್ಗೆ ತಿಂಡಿ ಕೊಟ್ಟರು, ಮಧ್ಯಾಹ್ನ ಊಟ ಕೊಡುತ್ತಾರೆ. ಬೆಳಗ್ಗೆ ಬ್ರೆಡ್​, ಹಾಲು ಕೊಟ್ಟರು ಸಾರ್​ ಎಂದು ಹೇಳುತ್ತಾರೆ, ನಾವು ಯಾರನ್ನು ನಂಬೋದು ಎಂದು ಅಧ್ಯಕ್ಷರು ಪ್ರಶ್ನಿಸಿದರು.ಆಸ್ಪತ್ರೆಯಲ್ಲಿ ದಾಖಲಾಗುವ ಬಾಣಂತಿ, ಗರ್ಭಿಣಿಯರಿಗೆ ತಿಂಡಿ ಊಟ ಕೊಡಲು ಅನುದಾನ ಇಲ್ಲ ಎಂದು ಸುಮ್ಮನೆ ಕೈ ಕಟ್ಟಿ ಕೂರಬೇಡಿ. ಜನಪ್ರತಿನಿಧಿಗಳು, ಸಮಾಜ ಸೇವಕರು, ದಾನಿಗಳನ್ನು ಭೇಟಿ ಮಾಡಿ ಕೇಳಿ, ನೀವು ಕೇಳಿದರೆ ಇಲ್ಲ ಎಂದು ಯಾರೂ ಹೇಳಲ್ಲ. ಬಡ ರೋಗಿಗಳಿಗೆ ತಿಂಡಿ ಊಟ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net