

ಕೊಳ್ಳೇಗಾಲ: ಪಟ್ಟಣದ ಶಂಕನಪುರ ಬಡಾವಣೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆಯಿಂದ 2ನೇ ಹಂತದ ಒಳಚರಂಡಿ ಯೋಜನೆಯಡಿ 2.36 ಕೋಟಿ ವೆಚ್ಚದಲ್ಲಿ ಶಂಕನಪುರ, ಉಪ್ಪಾರ ಮೋಳೆ ಮತ್ತು ಹೊಸ ಅಣಗಳ್ಳಿ ಬಡಾವಣೆಯಲ್ಲಿ ವೆಟ್‌ವೆಲ್ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಸಂಸದ ಸುನೀಲ್ ಬೋಸ್ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈ ಹಿಂದೆ 2018ರಲ್ಲಿ ಶಾಸಕ ದಿ. ಎಸ್.ಜಯಣ್ಣ ಅವರ ಅವಧಿಯಲ್ಲಿ ಯುಜಿಡಿ ಕಾಮಗಾರಿಗೆ ಅನುಮೋದನೆ ದೊರೆತು ಕೆಲಸವೂ ಆರಂಭಗೊಂಡಿತ್ತು. ಆದರೆ, ಮೂರು ಕಡೆಗಳಲ್ಲಿ ವೆಟ್‌ವೆಲ್ ಕಾಮಗಾರಿ ನಡೆದಿರಲಿಲ್ಲ. ಶಂಕನಪುರ ಬಳಿ ವೆಟ್‌ವೆಲ್ ನಿರ್ಮಿಸಲು ನಿಗದಿಯಾಗಿದ್ದ ಸ್ಥಳದಲ್ಲಿ ಗೊಂದಲ ಏರ್ಪಟ್ಟಿತ್ತು. ಜಮೀನು ಮಾಲೀಕ ನ್ಯಾಯಾಲಯ ಮೊರೆ ಹೋಗಿದ್ದರು. ಹಾಗಾಗಿ ಕೊಳಚೆ ನೀರು ಮ್ಯಾನ್ ವೋಲ್‌ನಲ್ಲಿ ತುಂಬಿ ಜನರಿಗೆ ಸಮಸ್ಯೆ ಆಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಹಿಂದೆ ಜಮೀನು ಮಾಲೀಕ ರಾಮಕೃಷ್ಣ ಮತ್ತು ಸೇತುರಾಮ್ ಅವರ ಬಳಿ ಕೈ ಮುಗಿದು ಸ್ಥಳ ನೀಡುವಂತೆ ಕೇಳಿ ಕೊಂಡಿದ್ದೆ. ಅದರಂತೆ ಅವರು ದೂರನ್ನು ಹಿಂಪಡೆದಿದ್ದರೆ ಎಂದರು.
ಇದೀಗ ರಾಮಕೃಷ್ಣ ಅವರ ಒಂದು ಎಕರೆ ಜಮೀನನ್ನು ವೆಟ್‌ವೆಲ್‌ಗೆ ಪಡೆದಿರುವಂತೆ ಆರ್‌ಟಿಸಿಯಲ್ಲಿ ನಮೂದಿಸಲಾಗಿದೆ. ಇರುವುದೇ ಒಂದು ಎಕರೆ ಜಮೀನು ಎಂದು ರಾಮಕೃಷ್ಣ ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ ದಾನಿಗಳಿಗೆ ಅನ್ಯಾಯವಾಗಬಾರದು ವೆಟ್‌ವೆಲ್ ನಿರ್ಮಾಣಕ್ಕೆ ಅಗತ್ಯ ವಿರುವ ಜಾಗವನ್ನು ಮಾತ್ರ ಪಡೆದು ಉಳಿದ ಜಾಗವನ್ನು ದಾನಿಗಳ ಹೆಸರಿಗೆ ಆರ್‌ಟಿಸಿ ಕೂರಿಸಬೇಕು ಎಂದು ತಹಸೀಲ್ದಾರ್ ಬಸವರಾಜು ಅವರಿಗೆ ಸೂಚನೆ ನೀಡಿದರು.