

ತೀರ್ಥಹಳ್ಳಿ: ಟ್ರೈನಿ ವೈದ್ಯೆ ಅತ್ಯಾಚಾರ ಮಾಡಿ ಕೊಲೆಗೈದಿರುವುದು ಹೇಯ ಕೃತ್ಯವಾಗಿದ್ದು ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಪಶ್ಚಿಮ ಬಂಗಾಳ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಕೇಂದ್ರ ಸರ್ಕಾರ ಹೇರಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ವಿದ್ಯಾರ್ಥಿನಿಯ ಕೊಲೆ ಪ್ರಕರಣ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಐಎಂಎ ಸಂಘಟನೆ ವತಿಯಿಂದ ಶನಿವಾರ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೊಲೆ ಪ್ರಕರಣದ ಸಾಕ್ಷಿಯನ್ನೇ ನಾಶ ಮಾಡಲು ಹೊರಟಿರುವ ಪಶ್ಚಿಮ ಬಂಗಾಳ ಸರ್ಕಾರ ನಾಗರಿಕರಿಗೆ ರಕ್ಷಣೆ ಕೊಡುವಲ್ಲಿ ವಿಲವಾಗಿದೆ ಎಂದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಗಣೇಶಭಟ್ ಮಾತನಾಡಿ, ದಿನದ 24 ತಾಸು ಕರ್ತವ್ಯ ನಿರ್ವಹಿಸಬೇಕಾದ ನಮ್ಮ ಸಿಬ್ಬಂದಿಗೆ ಈ ಘಟನೆಯಿಂದ ಆತ್ಮ ವಿಶ್ವಾಸವೇ ಕಳೆದಿದೆ. ಈ ಘಟನೆಯ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಡಾ.ಗಣೇಶ್ ಕಾಮತ್, ಹಿರಿಯ ವೈದ್ಯರಾದ ಡಾ.ಟಿ.ನಾರಾಯಣಸ್ವಾಮಿ, ಡಾ. ಎಸ್.ಮನೋಹರ್, ಡಾ.ಪದ್ಮಜಾ, ಡಾ. ನಂದಕಿಶೋರ್, ಡಾ.ಸತ್ಯನಾರಾಯಣ, ಡಾ.ಮಂಜುಳಾ, ಡಾ. ಅನಂತಮೂರ್ತಿ ಐತಾಳ್, ಡಾ. ಗಣೇಶ್ ನಾಯಕ್ ಸೇರಿದಂತೆ ಎಲ್ಲ ವೈದ್ಯರು ಹಾಗೂ ಸರ್ಕಾರಿ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು.