

ಚನ್ನರಾಯಪಟ್ಟಣ: ಪಟ್ಟಣಕ್ಕೆ ಆಗಮಿಸಿದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿ ಅಭಿನಂದಿಸಿದರು.
ತಾಲೂಕಿನ ಕಗ್ಗೆರೆ ಗ್ರಾಮದಲ್ಲಿನ ಧಾರ್ಮಿಕ ಸಭೆಗೆ ಶುಕ್ರವಾರ ರಾತ್ರಿ ತೆರಳುವ ವೇಳೆ ಪಟ್ಟಣದಲ್ಲಿರುವ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿರುವುದು ನಮಗೆಲ್ಲ ಖುಷಿ ತಂದಿದೆ. ಯುವಕ, ಉತ್ಸಾಹಿಯಾಗಿರುವ ಶ್ರೇಯಸ್ ಜಿಪಂ ಸದಸ್ಯನಾಗಿ ಉತ್ತಮ ಕೆಲಸ ಮಾಡಿರುವುದು, ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಹಿನ್ನಡೆ ಅನುಭವಿಸಿರುವುದು, ಇಡೀ ಜಿಲ್ಲೆಯಲ್ಲಿ ಒಳ್ಳೆಯ ಸ್ನೇಯಮಯಿ ಎಂಬ ಹೆಸರು ಪಡೆದಿರುವುದು ಆತನಿಗೆ ವರವಾಗಲಿದೆ. ಇನ್ನೊಂದು ವಾರದಲ್ಲಿ ತಾಲೂಕಿನ ಮುಖಂಡರೆಲ್ಲ ಸೇರಿ ತಗಡೂರು ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಸಭೆ ಸೇರಿ ಪ್ರಚಾರ ಆರಂಭಿಸುತ್ತೇವೆ ಎಂದರು.
ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಕತ್ತಲಿದ್ದು ಪ್ರಜಾಪ್ರಭುತ್ವ ಇಲ್ಲದಂತಾಗಿದೆ. ಸಹಕಾರಿ ಕ್ಷೇತ್ರ ಒಂದು ಕುಟುಂಬದ ಕಪಿಮುಷ್ಟಿಯಲ್ಲಿದೆ. ಇದೆಲ್ಲವನ್ನು ದೂರ ಮಾಡುವ ಅವಕಾಶ ಈಗ ಸಿಕ್ಕಿದ್ದು, ಯುವಕ, ಒಳ್ಳೆ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ. ಜಿಲ್ಲೆಯಲ್ಲಿ ದುಷ್ಟ ಶಕ್ತಿಯನ್ನು ಮಣಿಸುವ ಸಲುವಾಗಿ ಶಿವರಾತ್ರಿಯ ಶುಭ ದಿನದಂದು ಪಕ್ಷ ಟಿಕೆಟ್ ನೀಡಿದೆ. ತಾಲೂಕಿನ ಎಲ್ಲ ಹಿರಿಯರನ್ನು ಒಟ್ಟುಗೂಡಿಸಿ ಗೆಲುವಿಗೆ ಶ್ರಮಿಸುತ್ತೇವೆ. ಜಿಲ್ಲೆಯಲ್ಲಿ ಜೆಡಿಎಸ್‌ನವರ ಆಟಗಳು ನಿಲ್ಲಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದು ಹೇಳಿದರು.
ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು, ಮುಖಂಡರಿಗೆ ಆಭಾರಿಯಾಗಿದ್ದೇನೆ. ಎಲ್ಲ ತಾಲೂಕುಗಳಲ್ಲಿ ಪಕ್ಷವನ್ನು ಸಂಘಟಿಸಬೇಕಾಗಿದೆ. ಜೆಡಿಎಸ್‌ಗೆ ಜಿಲ್ಲೆಯ ಜನ ಸಾಕಷ್ಟು ಅವಕಾಶ ನೀಡಿದ್ದಾರೆ. ನನಗೂ ಒಂದು ಬಾರಿ ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮುಖಂಡರಾದ ಕಡಾಕಡಿ ಪೀರ್‌ಸಾಬ್, ಸಿ.ಎಸ್.ಯುವರಾಜ್, ರಾಮಣ್ಣ, ಉದಯ ಕುಮಾರ್ ಇತರರಿದ್ದರು.