

ಬೆಂಗಳೂರು: ಮಲ್ಲೇಶ್ವರದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಎಸ್.ಇ.ಪಿ. ಬ್ಯಾಚ್‌ನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ವಾಗತ ಕೋರುವ ಮೂಲಕ ಬರಮಾಡಿಕೊಳ್ಳಲಾಯಿತು.
ಪ್ರಾಂಶುಪಾಲರಾದ ಡಾ.ಶರ್ಮಿಷ್ಠ ದತ್ತ ಅತಿಥಿಗಳಿಗೆ ಸ್ವಾಗತವನ್ನು ಕೋರುವುದರ ಜೊತೆಗೆ ಕಾಲೇಜಿನ ಇತಿಹಾಸವನ್ನು ಪರಿಚಯಿಸಿ, ಶಿಕ್ಷಣ ಕ್ಷೇತ್ರದಲ್ಲಿ ಸಾಗಿಬಂದ ಹಾದಿಯನ್ನು, ಸಾಧನೆಯನ್ನು ಹಾಗೂ ಕಾಲೇಜಿನಲ್ಲಿರುವ ಕೋರ್ಸ್‌ಗಳ ಪರಿಚಯ ಮತ್ತು ಉನ್ನತ ಶಿಕ್ಷಣದ ಮಹತ್ವದ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಕುಲಪತಿಗಳಾದ ಪ್ರೊ.ಸಿಂಥಿಯಾ ಮೆನೆಜೆಸ್ ಪಾಲ್ಗೊಂಡು ಯುವ ಜನಾಂಗ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಶ್ರಮ, ತಾಳ್ಮೆ ಹೆತ್ತವರ ಬಗ್ಗೆ ಕೃತಜ್ಞತೆ, ಸಮಾಜಕ್ಕೆ ಸೇವೆ ಸಲ್ಲಿಸುವ ಗುರಿ ಇರಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಆಪರೇಷನ್ ಯೂನಿಸಿಸ್ ಪ್ರೈ.ಲಿ.ನ ಹಿರಿಯ ಮ್ಯಾನೇಜರ್ ಆಗಿರುವ ಮಿಸ್. ದೀಪಾ ವಿಶ್ವನಾಥ್ ತಮ್ಮ ಸಾಧನೆ, ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ತಮ್ಮ ಅನುಭವ ಹಂಚಿಕೊಂಡರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಂ.ಲ್ಯಾಕ್ ಟ್ರಸ್ಟಿ ಡಾ.ಗೀತಾ ನಾರಾಯಣ್, ಮತ್ತಿತರ ಸದಸ್ಯರು, ಶೈಕ್ಷಣಿಕ ಆಡಳಿತಾಧಿಕಾರಿಗಳು, ಐಕ್ಯೂಎಸಿ ಸಂಯೋಜಕರು, ಹಣಕಾಸು ಅಧಿಕಾರಿಗಳು, ಮುಖ್ಯ ಆಡಳಿತಾಧಿಕಾರಿಗಳು, ಅಧ್ಯಾಪಕ ವೃಂದ, ಅಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ.ರಮಾನಂದ ಕೆ.ವಿ. ರಾಜೇಶ್ವರಿ ನಿರೂಪಿಸಿ, ಡಾ.ಭವ್ಯಭಾನು ವಂದಿಸಿದರು.