ಶಿಷ್ಟಾಚಾರ ಪಾಲಿಸಿ ಸಂವಿಧಾನ ಜಾಗೃತಿ ಜಾಥಾ ಸ್ವಾಗತಿಸಿ

30M.D.R.2
Published on

ಮದ್ದೂರು: ರಾಜ್ಯಮಟ್ಟದ ಸಂವಿಧಾನ ಜಾಗೃತಿ ಜಾಥಾ ತಾಲೂಕಿಗೆ ಆಗಮಿಸಿದಾಗ ಸರ್ಕಾರಿ ಗೌರವಗಳೊಂದಿಗೆ ಶಿಷ್ಟಾಚಾರ ಪಾಲಿಸಿ ಸ್ವಾಗತಿಸುವ ಜತೆಗೆ ಯಶಸ್ವಿಗೊಳಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ಸೂಚಿಸಿದರು.


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಸಂಬಂಧ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನಮ್ಮ ಸರ್ಕಾರ ಗ್ರಾಮಾಂತರ ಭಾಗದಲ್ಲಿ ಸಂವಿಧಾನದ ಮಹತ್ವ ತಿಳಿಸುವ ಉದ್ದೇಶದಿಂದ ಸಂವಿಧಾನ ಪೀಠಿಕೆಯ ಜಾಗೃತಿ ಜಾಥಾ ಅನುಷ್ಠಾನಗೊಳಿಸಿದೆ. ಗ್ರಾಮಾಂತರ ಪ್ರದೇಶಗಳಿಗೆ ಜಾಥಾ ಬಂದಾಗ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಗೌರವ ಪೂರ್ವಕವಾಗಿ ಸ್ವಾಗತಿಸಿ ಸಂವಿಧಾನ ಪೀಠಿಕೆಯ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಜಾಥಾ ತಂಗುವ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಬಗ್ಗೆ ಭಾಷಣಗಳನ್ನು ಆಯೋಜಿಸಬೇಕು ಎಂದರು.


ತಾಪಂ ಇಒ ಎಲ್.ಸಂದೀಪ್ ಮಾತನಾಡಿ, ಗೌರವಪೂರ್ವಕವಾಗಿ ಸಂವಿಧಾನ ಜಾಗೃತಿ ಜಾಥಾವನ್ನು ಬರಮಾಡಿಕೊಂಡು, ಪೊಲೀಸರ ನೇತೃತ್ವದಲ್ಲಿ ಸಿಸಿ ಕ್ಯಾಮರಾಗಳ ವ್ಯವಸ್ಥೆ ಇರುವ ಕಡೆಗಳಲ್ಲಿ ಮೆರವಣಿಗೆಯ ವಾಹನ ತಂಗಲು ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅದರ ಉಸ್ತುವಾರಿ ವಹಿಸಿಕೊಂಡು ಜಾಗೃತಿಗೆ ಯಾವುದೇ ಲೋಪವಾಗದಂತೆ ಸುಸಜ್ಜಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ವಹಿಸಬೇಕು. ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.


ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ನಾಗಲಕ್ಷ್ಮೀ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ಮಳವಳ್ಳಿಯ ಮೂಲಕ ಮದ್ದೂರು ತಾಲೂಕಿಗೆ ಫೆ. 18 ರಂದು ಎಸ್.ಐ. ಹೊನ್ನಲಗೆರೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಕ್ಕೆ ಆಗಮಿಸುತ್ತದೆ. ಫೆ 18 ರಿಂದ 22 ರವರೆಗೆ ಮದ್ದೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನಗಳಿಗೆ ಜಾಗೃತಿ ಜಾಥಾ ತಲುಪಲಿದೆ. ಫೆ.22 ರಂದು ಮಧ್ಯಾಹ್ನ 3.30 ಗಂಟೆಗೆ ಶಿವಪುರದ ಧ್ವಜ ಸತ್ಯಾಗ್ರಹ ಸೌಧದ ಬಳಿ ತಾಲೂಕು ಮಟ್ಟದ ಕಾರ್ಯಕ್ರಮ ರೂಪಿಸಿ ವಿಚಾರಸಂಕಿರಣ ಮಾಡಿ ಅಲ್ಲಿಂದ ಜಾಗೃತಿ ಜಾಥಾದ ವಾಹನವನ್ನು ಬೆಂಗಳೂರಿಗೆ ಬೀಳ್ಕೊಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.


ವಿವಿಧ ಸಂಘಟನೆಗಳ ಮುಖಂಡರು ಸಂವಿಧಾನ ಜಾಗೃತಿ ಜಾಥಾದ ಬಗ್ಗೆ ವಿವಿಧ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ನಾಗಲಕ್ಷ್ಮೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ, ನರೇಗಾ ಸಹಾಯಕ ನಿರ್ದೇಶಕ ಟಿ.ವಿ.ಮಂಜುನಾಥ. ತಾಲೂಕು ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ಚಿದಂಬರಂ, ಮುತ್ತುರಾಜು, ಪ್ರೀತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net