ತವರಲ್ಲಿ ಕೃಷಿ ಸಚಿವ ಬಿಸಿಪಿಗೆ ಅದ್ದೂರಿ ಸ್ವಾಗತ

14 hkr 01.a B C Patil
Published on

ಹಿರೇಕೆರೂರ: ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸ್ವ ಕ್ಷೇತ್ರಕ್ಕೆ ಆಗಮಿಸಿದ ಸಚಿವ ಬಿ.ಸಿ. ಪಾಟೀಲ ಅವರನ್ನು ಬಿಜೆಪಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಶುಕ್ರವಾರ ಅದ್ದೂರಿಯಾಗಿ ಬರಮಾಡಿಕೊಂಡರು.

ತಾಲೂಕಿನ ಬತ್ತಿಕೊಪ್ಪ ಕ್ರಾಸಿಗೆ ಸಚಿವ ಬಿ.ಸಿ. ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಬರುತ್ತಿದ್ದಂತೆ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನರು ಬೈಕ್, ಕಾರು ರ‍್ಯಾಲಿ ಮೂಲಕ ಲಿಂಗದೇವರಕೊಪ್ಪ, ಕೋಡ, ತಾವರಗಿ ಗ್ರಾಮಗಳಲ್ಲಿ ಭವ್ಯ ಸ್ವಾಗತ ಕೋರಿದರು. ನಂತರ ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತಕ್ಕೆ ಆಗಮಿಸಿದ ಸಚಿವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಕ್ಕಡಿ ಗಾಡಿಯಲ್ಲಿ ಬೃಹತ್ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ನಂತರ ಸಚಿವ ಬಿ.ಸಿ. ಪಾಟೀಲ ನಿವಾಸದ ಹಿಂಭಾಗದಲ್ಲಿನ ದಿ.ಶಿವಮ್ಮ ಚನ್ನಬಸನಗೌಡ ಪಾಟೀಲ ರಂಗಮಂದಿರದಲ್ಲಿ ಸಾರ್ವಜನಿಕ ಸಭೆ ಹಾಗೂ ಅಭಿನಂದನಾ ಸಮಾರಂಭ ಜರುಗಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ, ರೈತನ ಮಗನಾಗಿ ನನಗೆ ಕೃಷಿ ಖಾತೆ ದೊರೆತಿರುವುದು ರಾಜ್ಯದ ರೈತರ, ಜನತೆಯ ಸೇವೆ ಮಾಡಲು ಒದಗಿ ಬಂದ ಸುವರ್ಣಾವಕಾಶವಾಗಿದೆ. ಉಪಚುನಾವಣೆಯಲ್ಲಿ ಎದುರಾದ ವಿರೋಧ ಪಕ್ಷಗಳ ಅಪಹಾಸ್ಯಕ್ಕೆ ಯು.ಬಿ. ಬಣಕಾರ ಜೊತೆಗೂಡಿ ಸರಿಯಾದ ಉತ್ತರ ನೀಡುವ ಮೂಲಕ ರಾಜ್ಯದಲ್ಲಿ ಒಂದು ಉತ್ತಮ ಸರ್ಕಾರ ಆಡಳಿತಕ್ಕೆ ಬರಲು ಕಾರಣವಾಗಿದ್ದೇವೆ. ರೈತನ ಮಗನಾದ ನಾನು ಇಂದು ಕೃಷಿ ಸಚಿವನಾಗಿರುವುದು ಸಂತೋಷ ತಂದಿದೆ ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಈ ದಿನ ತಾಲೂಕಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಹಲವು ವರ್ಷಗಳ ನಂತರ ತಾಲೂಕಿಗೆ ಸಚಿವ ಸ್ಥಾನ ಒದಗಿ ಬಂದಿದೆ. ನಮ್ಮ ಶಾಸಕರು ಕೃಷಿ ಸಚಿವರಾಗಿರುವುದು ತಾಲೂಕಿನ ಜನತೆಗೆ ಸಂತೋಷ ತಂದಿದೆ. ಕೃಷಿ ಖಾತೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಮೂಲಕ ತಾಲೂಕಿಗೆ ಹೆಮ್ಮೆ ತರಲಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕು ರಾಜ್ಯದಲ್ಲಿ ಮಾದರಿ ತಾಲೂಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಿದ್ಧರಾಜ ಕಲಕೋಟಿ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ ಹಾಗೂ ಇತರರು ಮಾತನಾಡಿದರು.

ವಿವಿಧ ಇಲಾಖೆ, ಸಂಘ, ಸಂಸ್ಥೆ, ಅಭಿಮಾನಿಗಳು, ಕಾರ್ಯಕರ್ತರಿಂದ ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net