ವಿಪಕ್ಷಗಳ ರಚನಾತ್ಮಕ ಟೀಕೆಗಳಿಗೆ ಸಿಎಂ ಸ್ವಾಗತ

CM_Opposition
Published on

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳ ಟೀಕೆಗಳನ್ನು ಸದಾ ಸ್ವಾಗತಿಸುತ್ತೇವೆ. ಆದರೆ, ರಚನಾತ್ಮಕವಾಗಿದ್ದಲ್ಲಿ ಮಾತ್ರ ಟೀಕೆಗಳನ್ನು ಜನರು ಒಪ್ಪಿಕೊಳ್ಳುತ್ತಾರೆ ಇಲ್ಲವಾದರೆ ತಿರಸ್ಕರಿಸುವುದು "ಗ್ಯಾರಂಟಿ' ಎಂದು ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ವಿಪಕ್ಷಗಳಿಗೆ ಪರೋಕ್ಷ ತಿರುಗೇಟು ಕೊಟ್ಟರು.

ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ವತಿಯಿಂದ ಆಯೋಜಿಸಿದ್ದ ವಿವಿಧ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ 1.46 ಲಕ್ಷ ಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲವೆಂದು ವಿಪಕ್ಷಗಳು ಬೊಬ್ಬೆಹೊಡೆಯುತ್ತಿವೆ. ಹಾಗಾದರೆ ಇದಕ್ಕೆಲ್ಲಿಂದ ದುಡ್ಡು ಬಂತು. ಈ ಕಾರ್ಯಕ್ರಮವೇ ವಿಪಕ್ಷಗಳ ಆಧಾರರಹಿತ ಟೀಕೆಗಳಿಗೆ ಉತ್ತರವಾಗಿದೆ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಆಡಳಿತ ನಡೆಸಬೇಕು. ತಾಲೂಕು, ಜಿಲ್ಲೆಗಳ ಅಭಿವೃದ್ಧಿಯಾದರೆ ರಾಜ್ಯ, ದೇಶ ಅಭಿವೃದ್ಧಿಯಾಗಲಿದೆ. ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಜಿಡಿಪಿ ಪ್ರಗತಿ ಕಾಣಲು ಸಾಧ್ಯ. ಇಡೀ ದೇಶದಲ್ಲಿ ನಮ್ಮ ರಾಜ್ಯವು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದಲ್ಲಿ ನಂಬರ್​ 1 ಆಗಿದೆ. ದೇಶದ ಜಿಡಿಪಿ 8% ಇದ್ದರೆ ರಾಜ್ಯದ ಜಿಡಿಪಿ 10.2% ತಲುಪಿದೆ. ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕೇಂದ್ರಕ್ಕೆ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

ರಾಜ್ಯದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ನಾ ಕೊಡುತ್ತಲೇ ಹೋಗುತ್ತೇವೆ. ಅಂಬೇಡ್ಕರ್​, ಗಾಂಧೀಜಿ ಆಶಯದಂತೆ ಎಲ್ಲರಿಗೂ ಸಮಾನ ಅವಕಾಶ ನಿರ್ಮಿಸಿಕೊಡುವ ಮೂಲಕ ಸಮ ಸಮಾಜ ನಿರ್ಮಿಸಬೇಕಿದೆ. ಜತೆಗೆ ಹಿಂದುಳಿದವರ, ದುರ್ಬಲರ ಏಳಿಗೆಗೆ ವಿಶೇಷ ಯೋಜನೆಗಳನ್ನು ರೂಪಿಸುತ್ತೇವೆ. ಎಸ್​ ಟಿಪಿ , ಟಿಎಸ್​ಪಿ ಕಾಯ್ದೆಯನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರ. ಎಲ್ಲಾ ಜಾತಿ, ಧರ್ಮದ ಜಾತಿ ಜನರು ಆರ್ಥಿಕವಾಗಿ ಪ್ರಗತಿ ಹೊಂದಿದರೆ ಮಾತ್ರ ದೇಶದ ಜಿಡಿಪಿ ಬೆಳವಣಿಗೆಯಾಗುತ್ತದೆ ಎಂದರು.

ಟೀಕೆಗಳು ಸಾಯಲಿವೆ, ಕೆಲಸಗಳು ಉಳಿಯಲಿವೆ: ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಸರ್ಕಾರಗಳು ನಕಲು ಮಾಡುತ್ತಿರುವುದು ಖುಷಿ ನೀಡಿದೆ. ಟೀಕೆಗಳು ಸಾಯಲಿವೆ. ಕೆಲಸಗಳು ಉಳಿಯಲಿವೆ. ಎತ್ತಿನಹೊಳೆ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ತುಮಕೂರಿಗೆ ನೀರು ಹರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಸಹ ವಿಪಕ್ಷಗಳ ಟೀಕೆಗಳಿಗೆ ಪ್ರತ್ಯುತ್ತರ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್​.ರಾಜಣ್ಣ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್​, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಎಸ್​ಆರ್​ಟಿಸಿ ಅಧ್ಯಕ್ಷ ಎಸ್​.ಆರ್​.ಶ್ರೀನಿವಾಸ್​, ಜೆಡಿಎಲ್​ಪಿ ನಾಯಕ ಸಿ.ಬಿ.ಸುರೇಶ್​ಬಾಬು, ಶಾಸಕರಾದ ಕೆ.ಷಡಕ್ಷರಿ, ಬಿ.ಸುರೇಶಗೌಡ, ಎಂ.ಟಿ.ಕೃಷ್ಣಪ್ಪ, ಜಿ.ಬಿ.ಜ್ಯೋತಿಗಣೇಶ್​, ಎಚ್​.ವಿ.ವೆಂಕಟೇಶ್​, ಆರ್​.ರಾಜೇಂದ್ರ, ಡಿ.ಟಿ.ಶ್ರೀನಿವಾಸ್​, ಚಿದಾನಂದ ಗೌಡ, ಪ್ರಕಾಶ್​ ರಾಥೋಡ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net