

ಬ್ರಹ್ಮಾವರ: ದೇವಾನುದೇವತೆಗಳ ಕಾಲದಲ್ಲಿ ಯಜ್ಞೋಪವೀತದಿಂದ ತೊಡಗಿ ಇಂದಿನ ಆಧುನಿಕ ಕಾಲದಲ್ಲಿ ಕೂಡಾ ನೇಕಾರರು ಮಾನವರ ಜೀವನದ ಮತ್ತು ಸಮಾಜದ ಒಂದು ಭಾಗವಾಗಿದ್ದಾರೆ ಎಂದು ವಾಸ್ತುತಜ್ಞ ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಹೇಳಿದರು.
ಗುರುವಾರ ಬಾರಕೂರು ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ದ.ಕ. ಪದ್ಮಶಾಲಿ ಮಹಾಸಭಾ ಮಂಗಳೂರು, ಜಿಲ್ಲಾ ವಿದ್ಯಾವರ್ಧಕ ಸಂಘ ಉಡುಪಿ ಮತ್ತು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ 8 ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಶ್ರೀ ವೀರಭದ್ರ ದೇವಸ್ಥಾನಗಳ ಆಡಳಿತ ಮೊಕ್ತೇಸರರ ಉಪಸ್ಥಿತಿಯಲ್ಲಿ ಜರುಗಿದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ ರಂಗನಕೆರೆ ಕಾರ್ಯಕ್ರಮ ಉದ್ಘಾಟಿಸಿದರು. ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನೇಕಾರ, ವೃತ್ತಿ ಶಿಕ್ಷಕ ಚೇರ್ಕಾಡಿ ಗೋಪಾಲ್ ಶೆಟ್ಟಿಗಾರ ಅವರನ್ನು ಮತ್ತು ನಾನಾ ಭಾಗದ ನೇಕಾರ ಸಹಕಾರಿಯ ಹಿರಿಯ ಮಹಿಳಾ ಮತ್ತು ಪುರುಷ ನೇಕಾರರನ್ನು ಸನ್ಮಾನಿಸಲಾಯಿತು. ಕೈಮಗ್ಗದ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.
ಬಾರಕೂರು ಗ್ರಾಪಂ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಪ್ರಮುಖರಾದ ಲಕ್ಷ್ಮಣ ಕೊಡಿಯಾಲಬೈಲ್, ಗೋಪಾಲ್ ಶೆಟ್ಟಿಗಾರ್, ಪ್ರೇಮಾನಂದ ಶೆಟ್ಟಿಗಾರ್, ಸಂಜೀವ ಶೆಟ್ಟಿಗಾರ್, ರಾಘವ ಶೆಟ್ಟಿಗಾರ್ ಸಾಲಿಕೇರಿ, ಚಂದ್ರಶೇಖರ ಶೆಟ್ಟಿಗಾರ್ ಬಸ್ರೂರು, ವಿಶಾಲಾಕ್ಷಿ ಶೆಟ್ಟಿಗಾರ್ ಹಳೆಯಂಗಡಿ ಮೊದಲಾದವರು ಉಪಸ್ಥಿತರಿದ್ದರು.
ರತ್ನಾಕರ ಇಂದ್ರಾಳಿ ಸ್ವಾಗತಿಸಿದರು. ಮಾಧವ ಶೆಟ್ಟಿಗಾರ್ ಕೆರೆಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ನಿರೂಪಿಸಿದರು.