

ವಿಜಯವಾಣಿ ಸುದ್ದಿಜಾಲ ಉಡುಪಿ
ಮಣಿಪಾಲದ ರತ್ನ ಸಂಜೀವ ಕಲಾ ಮಂಡಲದ ಪ್ರೋತ್ಸಾಹದಲ್ಲಿ ಆ.21ರಿಂದ ಆ.30ರ ವರೆಗೆ ಡಾ. ಜಿ.ಶಂಕರ ಮಹಿಳಾ ಕಾಲೇಜಿನ ಪಿಜಿ ಸಭಾಭವನದಲ್ಲಿ ಒಂಬತ್ತು ದಿನ, 216 ತಾಸು ನಿರಂತರ ನವರಸ ದೀಕ್ಷಾ ವೈಭವಂ ಭರತನಾಟ್ಯ ಪ್ರದರ್ಶನ ನೀಡಲಿದ್ದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡುವ ಪ್ರಯತ್ನ ಇದಾಗಿದೆ ಎಂದು ಉದಯೋನ್ಮುಖ ಭರತನಾಟ್ಯ ಕಲಾವಿದೆ ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ. ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಆಗಸ್ಟ್ 18ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದ್ವಾನ್ ಯಶ್ವಂತ ಎಂ.ಜಿ. ಅವರು 24 ಗಂಟೆ ಕಾಲ ಎಸ್.ಪಿ. ಬಾಲಸುಬ್ರಹಣ್ಯಂ ಅವರು ಹಾಡಿರುವ ಹಾಡುಗಳನ್ನೇ ಹಾಡಿ ವರ್ಲ್ಡ್ ರೆಕಾರ್ಡ್ ಮಾಡಿದ್ದರು. ಅದರಿಂದ ಪ್ರೇರೇಪಿತಳಾಗಿ ನಾನೂ ಸಹ ಕಲಿತ ವಿದ್ಯೆಯ ಮೂಲಕ ಹೊಸ ಸಾಧನೆ ಮಾಡಬೇಕೆಂಬ ಬಯಕೆ ಹೊಂದಿದ್ದೆ ಎಂದು ತಿಳಿಸಿದರು.
ನನ್ನ ಗುರುಗಳಾದ ವಿದ್ವಾನ್ ಶ್ರೀಧರ ರಾವ್ ಬನ್ನಂಜೆ ಅವರಲ್ಲಿ ಹೇಳಿಕೊಂಡಾಗ ಮೊದಲು ಭರತನಾಟ್ಯ ವಿದ್ವತ್ ಪೂರ್ಣಗೊಳಿಸಿಲು ಸಲಹೆ ನೀಡಿದರು. ಇದೀಗ ನನ್ನ ವಿದ್ವತ್ ಪೂರ್ಣಗೊಂಡಿದ್ದು 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಲು ಸಜ್ಜಾಗಿದ್ದೇನೆ ಎಂದು ದೀಕ್ಷಾ ವಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ವಾನ್ ಶ್ರೀಧರ ರಾವ್ ಬನ್ನಂಜೆ, ವಿದುಷಿ ಉಷಾ ಹೆಬ್ಬಾರ, ಅಶ್ವಿನಿ ಮಹೇಶ ಠಾಕೂರ್ ಉಪಸ್ಥಿತರಿದ್ದರು.