

ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ತಿಂಗಳು ಮಳೆ ಕೊರತೆ ಉಂಟಾಗಬಹುದಾ ಅಥವಾ ಇಲ್ಲವೋ ಎಂಬುದರ ಬಗ್ಗೆ ಮುಂದಿನ ನಾಲ್ಕೈದು ದಿನಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಬಿಡುಗಡೆ ಮಾಡಲಿದೆ.
ಪ್ರಸಕ್ತ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯಲಿದೆ ಎಂದು ಮೇ ಕೊನೆಯ ವಾರದಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಐಎಂಡಿ ತಿಳಿಸಿತ್ತು. ಅದರಂತೆ, ಜೂನ್‌ನಲ್ಲಿ ವಿಪರೀತವಾಗಿ ಮಳೆ ಕುಂಠಿತಗೊಂಡಿದೆ. ಜೂ.1ರಿಂದ ಜೂ.25ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 160 ಮಿಮೀ ಮಳೆಯಾಗಬೇಕಿತ್ತು. ಆದರೆ, 63 ಮಿಮೀ ಬಿದ್ದಿದ್ದು, ಶೇ.61 ಮಳೆ ಕೊರತೆಯಾಗಿದೆ.
ಮಲೆನಾಡಲ್ಲಿ ಶೇ.77, ಕರಾವಳಿಯಲ್ಲಿ ಶೇ.66, ಉತ್ತರ ಕರ್ನಾಟಕದಲ್ಲಿ ಶೇ.58 ಹಾಗೂ ದಕ್ಷಿಣ ಕರ್ನಾಟಕದಲ್ಲಿ ಶೇ.22 ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ರೈತಾಪಿ ವರ್ಗ ದಯನೀಯ ಸ್ಥಿತಿ ಎದುರಿಸುವಂತಾಗಿದೆ.
ಕರಾವಳಿಯಲ್ಲಿ ಮಳೆ: ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಕರಾವಳಿಯಲ್ಲಿ ಮುಂದಿನ ಐದು ದಿನ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ.26ರಿಂದ ಜೂ.30ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಮಲೆನಾಡು, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.