

ಕೊಳ್ಳೇಗಾಲ: ತಾಲೂಕಿನ ವ್ಯಾಪ್ತಿಯಲ್ಲಿ ಬುಧವಾರ ಶ್ರದ್ಧಾಭಕ್ತಿಯಿಂದ ಆಯುಧ ಪೂಜೆಯನ್ನು ನೆರವೇರಿಸಲಾಯಿತು.
ಪಟ್ಟಣದ ತಾಲೂಕು ಕಚೇರಿ, ಪಟ್ಟಣ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ಗ್ರಾಮಾಂತರ ಪೊಲೀಸ್ ಠಾಣೆ, ಅಬಕಾರಿ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಇನ್ನಿತರ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ಹಾಗೂ ವಿವಿಧ ರೀತಿಯ ಎಲ್ಲ ಮಳಿಗೆಗಳು ಹಾಗೂ ಮನೆಗಳಲ್ಲಿ ವಾಹನಗಳು, ಯಂತ್ರೋಪಕರಣಗಳು, ಕೃಷಿ ಪರಿಕರಗಳು, ಮನೆ ಬಳಕೆಯ ಆಯುಧಗಳಿಗೆ ಸಡಗರ ಸಂಭ್ರಮದಿಂದ ಅರಿಶಿಣ, ಕುಂಕುಮ ಹಚ್ಚಿ, ದೀಪ ಬೆಳಗಿ ಬೂದು ಕುಂಬಳಕಾಯಿ, ತೆಂಗಿನ ಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಸಿಹಿ ವಿತರಣೆ ಮಾಡಿದರು.
ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಇರುವ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು. ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ಜನರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.