ಧ್ವಜ ಹಿಡಿದು ಚುನಾವಣೆಗೆ ಹೋಗುತ್ತಿಲ್ಲ

4-pnp 1
Published on

ಪಾಂಡವಪುರ: ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೆಲ್ಲ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಯಾವ ಯೋಜನೆ ರೂಪಿಸಿ ಜಾರಿಗೆ ತಂದಿದೆ ಎಂಬುದನ್ನು ಆ ಪಕ್ಷದ ನಾಯಕರು ತಾಕತ್ತಿದ್ದರೆ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಸವಾಲು ಹಾಕಿದರು.


ತಾಲೂಕಿನ ಕೆನ್ನಾಳು ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನಸಾಮಾನ್ಯರ ಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಈಗಾಗಲೇ ಸಾಧಿಸಿರುವುದನ್ನು ಜನರ ಮುಂದೆ ಎದೆ ತಟ್ಟಿಕೊಂಡು ಹೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್ಸಿಗರ ಸಾಧನೆ ಶೂನ್ಯ. ಅಟಾಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ರಾಜ್ಯದ ಪ್ರತಿಯೊಬ್ಬ ವೃದ್ಧರಿಗೂ ಪಿಂಚಣಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಮುಂದಿನ ಐದು ವರ್ಷಗಳ ಅವಧಿಗೆ ಉಚಿತ ಅಕ್ಕಿ ಯೋಜನೆ ವಿಸ್ತರಿಸಲಾಗಿದೆ. ರಾಜ್ಯದ ಜನರ ಪಾಲಿಗೆ ಸಿಗುತ್ತಿರುವ ಈ ಎಲ್ಲ ಯೋಜನೆಗಳಿಗೆ ಎಷ್ಟು ಖರ್ಚಾಗುತ್ತಿದೆ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿದ್ದಿಯಾ ಎಂದು ಪ್ರಶ್ನಿಸಿದರು.


ದೇಶದ ಪ್ರಮುಖ ನಾಲ್ಕು ವರ್ಗಗಳ ಅಭಿವೃದ್ಧಿ ಚಿಂತನೆಯೊಂದಿಗೆ ದೇಶ ಕಟ್ಟುವ ಮಹತ್ವಕಾಂಕ್ಷೆಯ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ರೈತರು, ಮಹಿಳೆಯರು, ಯುವಕರು ಹಾಗೂ ಕಾರ್ಮಿಕ ವರ್ಗ ಅಭಿವೃದ್ಧಿಯಾದರೆ ಭಾರತ ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೆ ಬಂದು ನಿಲ್ಲುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ 302 ಯೋಜನೆಗಳನ್ನು ಜಾರಿಗೆ ತಂದಿದ್ದು, 106 ಯೋಜನೆಗಳು ವ್ಯಕ್ತಿಗತವಾಗಿ ತಲುಪಿವೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಪರವಾದ ಯೋಜನೆಗಳನ್ನು ರೂಪಿಸಿದೆ. ಬಿಜೆಪಿ ಧ್ವಜ ಹಿಡಿದುಕೊಂಡು ಚುನಾವಣೆಗೆ ಹೋಗುತ್ತಿಲ್ಲ. ಧ್ವಜದ ಮೇಲೆ ರಾಜಕಾರಣ ಮಾಡಿದವರಿಗೆ ಮಂಡ್ಯ ಜಿಲ್ಲೆಯ ಜನತೆ ಚಳವಳಿ ಮೂಲಕ ಒಂದೇ ವಾರದಲ್ಲಿ ಉತ್ತರ ನೀಡಿ ಧ್ವಜ ತೆಗೆಸಿದವರಿಗೆ ಬುದ್ದಿ ಕಲಿಸಿದ್ದಾರೆ ಎಂದರು.


ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್‌ಗೌಡ ಮಾತನಾಡಿ, ಬಿಜೆಪಿಯನ್ನು ವಿರೋಧಿಸುತ್ತಿದ್ದ ಜೆಡಿಎಸ್ ಇಂದು ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶದಿಂದ ಕೈ ಜೋಡಿಸಿರುವುದನ್ನು ಸ್ವಾಗತಿಸುತ್ತೇವೆ. ಜೆಡಿಎಸ್ ಎನ್‌ಡಿಎ ಕೂಟ ಸೇರಿದೆಯಷ್ಟೇ, ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಎಂಬುದು ಮಾತುಕತೆಯ ಮೂಲಕ ನಿರ್ಧಾರವಾಗಿಲ್ಲ. ಹಾಸನ , ಮಂಡ್ಯ ಎರಡು ಕ್ಷೇತ್ರಗಳು ಬಿಜೆಪಿಗೆ ಸಿಗಬಹುದು. ಹೀಗಾಗಿ ಪ್ರತಿ ಗ್ರಾಮದಲ್ಲೂ ಪಕ್ಷ ಕಟ್ಟುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಒಂದು ವೇಳೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಒಪ್ಪಿಗೆ ಪಡೆದುಕೊಳ್ಳಬೇಕು. ಅದೇ ರೀತಿ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ಮೈತ್ರಿಯಿಂದಾಗಿ ಕ್ಷೇತ್ರ ಬಿಟ್ಟುಕೊಡಬೇಕಾದ ಅನಿವಾರ್ಯತೆ ಬಂದಾಗ ಕಾರ್ಯಕರ್ತರು ಎದೆಗುಂದಬಾರದು ಎಂದು ಧೈರ್ಯ ತುಂಬಿದರು.


ರಾಷ್ಟ್ರ, ರಾಜ್ಯದ ಜತೆಗೆ ಮಂಡ್ಯಕ್ಕೂ ಕುಟುಂಬ ರಾಜಕಾರಣ ವ್ಯಾಪಿಸಿದೆ. ಗೌಡರಿಗೆ ಹಾಸನದಲ್ಲೂ ನೆಂಟರಿದ್ದಾರೆ. ಮಂಡ್ಯದಲ್ಲೂ ನೆಂಟರು ಇರುತ್ತಾರೆ. ಪ್ರತಿಯೊಂದು ರಾಜ್ಯದಲ್ಲೂ ಒಂದಿಲ್ಲೊಂದು ಪಕ್ಷ ಕುಟುಂಬ ರಾಜಕಾರಣದಲ್ಲಿ ತೊಡಗಿದೆ. ನಮ್ಮ ಸಂಕಲ್ಪ ಕುಟುಂಬ ರಾಜಕಾರಣದ ವಿರುದ್ಧ ಇರಬೇಕು. ರಾಜ್ಯದ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೇ ಬೇಡ. ಅವರಾಯ್ತು, ಮಕ್ಕಳು ಆಯ್ತು, ಮೊಮ್ಮಕ್ಕಳೂ ಆಯ್ತು. ಈಗ ಮರಿ ಮಕ್ಕಳ ಸರದಿ ಎಂದು ಜೆಡಿಎಸ್ ನಾಯಕರ ಹೆಸರೇಳದೆ ಪರೋಕ್ಷವಾಗಿ ಮೈತ್ರಿ ಪಕ್ಷದ ನಾಯಕರನ್ನು ಕುಟುಕಿದರು.


ಜಿಲ್ಲೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿರಲಿಲ್ಲ. ಕೆ.ಸಿ.ನಾರಾಯಣಗೌಡರು ಮೊದಲ ಬಾರಿಗೆ ಖಾತೆ ತೆರೆದರು. ಪಕ್ಷ ಅವರಿಗೆ ಮಂತ್ರಿ ಸ್ಥಾನ ನೀಡಿ ಗೌರವಿಸಿದೆ. ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸುವ ಮೂಲಕ ಕಾಂಗ್ರೆಸ್ ನಮ್ಮ ಆಚಾರ ವಿಚಾರಗಳನ್ನು ವಿರೋಧ ಮಾಡಿದೆ. ಕಾಂಗ್ರೆಸ್ ನಾಯಕರ ನಡೆಯನ್ನು ವಿರೋಧಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಕೆರಗೋಡಿನ ಜನರೊಂದಿಗೆ ಬಿಜೆಪಿ ಕಾರ್ಯಕರ್ತರು ನಿಂತು ಹೋರಾಟ ಮಾಡಿರುವುದು ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು.


ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ಮುಖಂಡರಾದ ಡಾ.ಸಿದ್ದರಾಮಯ್ಯ, ನಂಜುಂಡೇಗೌಡ, ಎಸ್.ಪಿ.ಸ್ವಾಮಿ, ಈ.ಸಿ.ನಿಂಗರಾಜು. ಟಿ.ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net