

ಕುಶಾಲನಗರ: ಕುಶಾಲನಗರ ಸಮೀಪದ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಮತ್ತು ವಿದ್ಯಾರ್ಥಿ ಸಂಘದ ವತಿಯಿಂದ ನಾವು ಮನುಜರು ವಿನೂತನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲಾ ಮುಖ್ಯ ಬಿ.ಆರ್.ಸತ್ಯನಾರಾಯಣ, ಮಕ್ಕಳಿಗೆ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯನ್ನು ಬೆಳೆಸಲು ಈ ವಿನೂತನ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ ಎಂದರು.
ಶಾಲಾ ಮಕ್ಕಳಲ್ಲಿ ಸಾಮರಸ್ಯ ಮೂಡಿಸುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತುವ ಮತ್ತು ವೈಜ್ಞಾನಿಕ ಮನೋಭಾವನೆ ಮೂಡಿಸಲು ನಾವು ಮನುಜರು ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಕನ್ನಡ ಭಾಷಾ ಶಿಕ್ಷಕ ಟಿ.ಬಿ.ಮಂಜುನಾಥ್ ಮಾತನಾಡಿ, ಶಾಲಾ ಮಕ್ಕಳಲ್ಲಿ ಸಾಮರಸ್ಯ ಮೂಡಿಸುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತುವ ಮತ್ತು ವೈಜ್ಞಾನಿಕ ಮನೋಭಾವನೆ ಮೂಡಿಸಲು ನಾವು ಮನುಜರು ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ನೀಡಿದ ತೊರೆನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಪನ್ಮೂಲ ಶಿಕ್ಷಕ ಅನಿಲ್ ಕುಮಾರ್, ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನಾಯಕತ್ವ ಗುಣ, ವ್ಯಕ್ತಿತ್ವ ಬೆಳವಣಿಗೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ಮಾಹಿತಿ ನೀಡಿದರು.
ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ನೈತಿಕ ಶಿಕ್ಷಣ, ಸಮಾಜ ಸುಧಾರಕರು ಮತ್ತು ಕ್ರಾಂತಿಗಳ ಬಗ್ಗೆ, ಶಿಕ್ಷಣ, ಕೈಗಾರಿಕೆಗಳು, ಸಮೀಪದ ಐತಿಹಾಸಿಕ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು, ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವ ಕುರಿತು ಚರ್ಚೆ ಇತ್ಯಾದಿಗಳನ್ನು ಕಲಿಸಲಾಗುವುದು ಎಂದು ತಿಳಿಸಿದರು.
ಶಾಲೆಯ ಶಿಕ್ಷಕರಾದ ಬಿ.ಪಿ.ಸವಿತಾ, ಜಿ.ಶ್ರೀಹರ್ಷ, ಎಂ.ಯು.ದಿವ್ಯಾ, ಎಸ್.ಕೆ.ಶೈಲಾ, ದೈಹಿಕ ಶಿಕ್ಷಣ ಶಿಕ್ಷಕಿ ಶೈಲಾ ಇದ್ದರು.
ಕಾರ್ಯಕ್ರಮದ ಕುರಿತು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.